ಉಡುಪಿ: ಹಸಿವು ಎಂದವರಿಗೆ ಪ್ರತಿನಿತ್ಯ ಆಹಾರ ನೀಡುತ್ತಿರುವ ಎಲೆ ಮರೆಯ ದಾನಿಗಳು
ಉಡುಪಿ – ಕೋವಿಡ್ 19 ಜನರನ್ನು ದಿಕ್ಕಾಪಾಲಾಗಿಸಿದೆ, ಹಸಿವು ನೀಗಿಸಲು ತಮ್ಮ ಊರಿನಿಂದ ಬೇರೆ ಊರಿಗೆ ಬಂದ ವಲಸೆ ಕಾರ್ಮಿಕರ ಜೀವನ ಮೂರಾಬಟ್ಟೆಯಾಗಿದೆ, ಬದುಕು ಕಟ್ಟಿಕೊಳಲು ಊರು ಬಿಟ್ಟು ಬಂದವರ ಬದುಕು ಕಳೆಹೀನವಾಗಿದೆ. ಹೊರ ರಾಜ್ಯದಿಂದ ದುಡಿಯುವ ಸಲುವಾಗಿ ಉಡುಪಿಗೆ ಬಂದವರು ಲಾಕ್ ಡೌನ್ ನಿಂದಾಗಿ ಅತ್ತ ಊರಿಗೆ ತೆರಳಲಾಗದೆ ಇತ್ತ ಇಲ್ಲಿಯೂ ಕೆಲಸವೂ ಇಲ್ಲದೆ, ತುತ್ತು ಅನ್ನಕ್ಕೂ ಅಲೆದಾಡುವ ಪರಿಸ್ಥಿತಿ ಬಂದಿದೆ.
ಅಂಥವರಿಗೆ ಪ್ರತಿನಿತ್ಯ ನಿರಂತರ ಅನ್ನವನ್ನು ಪರಿವರ್ತನಾ ಫೌಂಡೇಶನ್ ಮಣಿಪಾಲ ಹಾಗು ಶ್ರೀ ಲಕ್ಷ್ಮೀಕೃಪಾ ಕಲ್ಯಾಣ ಮಂಟಪ ಓಂತಿಬೆಟ್ಟು ಮತ್ತು ಚೌಡೇಶ್ವರಿ ಕ್ರಿಕೆರ್ಟಸ್ ಶಾಂತಿನಗರ ಇವರ ಜಂಟಿ ಆಶ್ರಯದಲ್ಲಿ ಉಡುಪಿಯ ಆಸುಪಾಸಿನ ಬಡ ಕಾರ್ಮಿಕರು ಹಾಗೂ ಅಶಕ್ತರಿಗೆ ಒಂದು ಹೊತ್ತಿನ ಊಟದ ವ್ಯವಸ್ಥೆಯನ್ನು ಮಾರ್ಚ್ 28 ರಿಂದ ಪ್ರಾರಂಭ ಮಾಡಿದ್ದಾರೆ. ಸುಮಾರು 650 ಜನರಿಗೆ ಮಣಿಪಾಲ ಪೊಲೀಸರ ಮನವಿ ಮೇರೆಗೆ ಪ್ರಾರಂಭ ಮಡಿದ ಈ ದಾಸೋಹ ಇದೀಗ ಪ್ರತಿನಿತ್ಯ 2150ಕ್ಕಿಂತಲೂ ಅಧಿಕ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತಾರೆ. ಉಡುಪಿ, ಮಣಿಪಾಲದ ಅನೇಕ ಕಡೆಗಳಲ್ಲಿ ತುತ್ತು ಅನ್ನಕ್ಕೆ ಪರಾಡುತ್ತಿರುವರಿಗೆ ಅನ್ನ ನೀಡುತ್ತಿದ್ದಾರೆ. ಇದಕ್ಕೆ ಮಣಿಪಾಲ ಪೊಲೀಸರು ಸಾಥ್ ನೀಡಿದ್ದಾರೆ. ಈ ಕಾರ್ಯಕ್ಕೆ ಸಮಾಜದ ಹಲವಾರು ದಾನಿಗಳು ಸಹಕರಿಸಿದ್ದು, ಯಾವುದೇ ಪ್ರಚಾರ ಬಯಸದೆ ಅಗತ್ಯವುಳ್ಳವರಿಗೆ ಆಹಾರ ನೀಡುತ್ತಿರುವ ಪರಿವರ್ತನಾ ತಂಡದ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.
” ಮಣಿಪಾಲ ಪೊಲೀಸ್ ಠಾಣೆಯ ಸಿಬ್ಬಂದಿಗಳ ಮನವಿಯ ಮೇರೆಗೆ ಸುಮಾರು 650 ಜನರಿಗೆ ಮೊದಲು ಆಹಾರ ನೀಡುತ್ತಿದು, ನಂತರ ಅದು 1 ,500ಕ್ಕೆ ಮುಟ್ಟಿತ್ತು ಆದರೆ ಈಗ ಅದು ಬರೋಬರಿ 2150 ಜನರಿಗೆ ಆಹಾರ ಹಂಚುತ್ತಿದ್ದೇವೆ ಎಂದು ಪರಿವರ್ತನಾ ಫೌಂಡೇಶನ್ ಸ್ಥಾಪಕರಾದ ಮೋಹನ್ ಭಟ್ ಹೇಳುತ್ತಾರೆ. ಶಾಂತಿನಗರ ವಿಜಯನಗರ , ಶೆಟ್ಟಿಬೆಟ್ಟು ,ರೈಲ್ವೆ ಗೋಡನ್ ಮಣಿಪಾಲ, ಪಣಿಯಾಡಿ, ಅಲೆವೂರು ಹೀಗೆ ಉಡುಪಿ, ಮಣಿಪಾಲ ಆಸುಪಾಸಿನಲ್ಲಿ ವಾಸಿಸುತ್ತಿರುವ ವಲಸಿಗರಿಗೆ, ಹಾಗು ಮನೆಯಲ್ಲಿ ಒಬ್ಬಂಟಿಯಾಗಿರುವವರಿಗೆ ನಮ್ಮ ತಂಡ ಆಹಾರವನ್ನ ಪ್ಯಾಕೆಟ್ ಮಾಡಿ ನೀಡುತ್ತಿದ್ದೇವೆ.
ಅನೇಕ ಜನ ನಮಗೆ ಈ ಕಾರ್ಯಕ್ಕೆ ಸಾಥ್ ನೀಡಿದ್ದಾರೆ, ಜನತಾ ಗ್ಯಾರೇಜ್ ನ ತಂಡವು ಸ್ವಯಂ ಸೇವಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಚೌಡೇಶ್ವರಿ ಕ್ರಿಕೆರ್ಟಸ್ ಮಣಿಪಾಲ ನಮ್ಮ ಜೊತೆ ನಿಂತಿದ್ದಾರೆ, ಪ್ರಾರಂಭದಲ್ಲಿ ಧೂಮಾವತಿ ದೈವಸ್ಥಾನ ಅರಿಯಡಿ, ಸಾಯಿಬಾಬಾ ಮಂದಿರ ಕೊಡವೂರು ಸಹಕರಿಸಿದ್ದಾರೆ. ಮಣಿಪಾಲ ಸನ್ರೈಸ್ ಸೆಲ್ಯೂಷನ್ ಮಾಲಕರಾದ ಧನ್ ರಾಜ್ ಶೆಟ್ಟಿ ಆರ್ಥಿಕ ಸಹಾಯದೊಂದಿಗೆ ಸ್ವಯಂ ಸೇವಕರಾಗಿ ಕೈಜೋಡಿಸಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯ ಸಿಬ್ಬಂದಿಗಳು ನಮ್ಮ ಜೊತೆಗೆ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ನಮಗೆ ಅಡುಗೆ ಕಾರ್ಯವನ್ನು ಶ್ರೀಲಕ್ಷ್ಮೀಕೃಪಾ ಕಲ್ಯಾಣ ಮಂಟಪ ಓಂತಿಬೆಟ್ಟು ಇದರ ಮುಖ್ಯಸ್ಥರಾದ ಅಶ್ವಿನ್ ಸಹೋದರರು ಉಚಿತವಾಗಿ ಮಾಡಿಕೊಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಯಾರಾದರು ವಸ್ತು ರೂಪದಲ್ಲಿ ಸಹಕರಿಸುವ ಇಚ್ಛೆ ಉಳ್ಳವರು ಮಣಿಪಾಲ ಪೊಲೀಸ್ ಠಾಣೆಗೆ ತಲುಪಿಸಬಹುದು. “
ಮೋಹನ್ ಭಟ್ ಪರಿವರ್ತನಾ ಫೌಂಡೇಶನ್ 9986871716 ಅವರಿಗೆ ಕರೆಮಾಡಬಹುದು.