ದೇಶಿ ಆರ್ಥಿಕ ಚಟುವಟಿಕೆಗಳು ರಭಸ ಕಳೆದುಕೊಂಡಿದೆ:ಆರ್ಬಿಐ ಗರ್ವನರ್
ನವದೆಹಲಿ: ದೇಶಿ ಆರ್ಥಿಕ ಚಟುವಟಿಕೆಗಳು ರಭಸ ಕಳೆದುಕೊಂಡಿದ್ದು, ವೃದ್ಧಿ ದರವು ನಿಧಾನಗೊಂಡಿರುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಒಪ್ಪಿಕೊಂಡಿದ್ದಾರೆ.
ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯಲ್ಲಿ ಚರ್ಚಿಸಲಾದ ವಿಷಯಗಳನ್ನು ಗುರುವಾರ ಬಹಿರಂಗಪಡಿಸಲಾಗಿದ್ದು, ಅದರಲ್ಲಿ ಈ ವಿವರಗಳಿವೆ. ದೇಶಿ ಆರ್ಥಿಕ ವೃದ್ಧಿ ದರವು ಕುಂಠಿತಗೊಂಡಿರುವುದನ್ನು ದಾಸ್ ಅವರು ಒಪ್ಪಿಕೊಂಡಿರುವುದು ಸಭೆಯ ಕಲಾಪದಲ್ಲಿ ದಾಖಲಾಗಿದೆ.
ಆರ್ಥಿಕತೆಯ ಬೆಳವಣಿಗೆಯು 2012ರಿಂದ 2017ರ ಅವಧಿಯಲ್ಲಿ ಶೇ 5ಕ್ಕಿಂತ ಕಡಿಮೆ ಮಟ್ಟಕ್ಕೆ ಕುಸಿದಿತ್ತು ಎಂದು ಕೇಂದ್ರ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಅವರೂ ವಿಶ್ಲೇಷಿಸಿದ್ದಾರೆ. ಪ್ರಧಾನಿ ಆರ್ಥಿಕ ಸಲಹಾ ಸಮಿತಿಯು ಈ ವಾದ ಸರಣಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಬೆನ್ನಲ್ಲೇ ದಾಸ್ ಅವರ ಈ ಧೋರಣೆ ಬಹಿರಂಗಗೊಂಡಿದೆ.
‘ಒಟ್ಟಾರೆ ಆರ್ಥಿಕ ಚಟುವಟಿಕೆಗಳು ತಮ್ಮ ತೀವ್ರತೆ ಕಳೆದುಕೊಂಡಿರುವುದಕ್ಕೆ ಸ್ಪಷ್ಟ ಸಾಕ್ಷ್ಯಗಳಿವೆ. 2018–19ರ ಹಣಕಾಸು ವರ್ಷದ 4ನೆ ತ್ರೈಮಾಸಿಕದ ವೃದ್ಧಿ ದರವು ಶೇ 5.8ಕ್ಕೆ ಇಳಿದಿದೆ. ಬೆಳವಣಿಗೆಯ ವೇಗವು ನಿಧಾನಗೊಂಡಿದೆ. ಅದರಲ್ಲೂ ವಿಶೇಷವಾಗಿ ಬಂಡವಾಳ ಹೂಡಿಕೆ ಚಟುವಟಿಕೆಗಳು ತೀವ್ರ ಕುಸಿತ ಕಂಡಿವೆ’ ಎಂದು ದಾಸ್ ಅವರು ಸಭೆಯಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
‘ಪೂರೈಕೆಗೆ ಸಂಬಂಧಿಸಿದಂತೆಯೂ ಕೃಷಿ ಮತ್ತು ಪೂರಕ ಚಟುವಟಿಕೆಗಳು ನಿಧಾನಗೊಂಡಿವೆ. ಸೇವಾ ವಲಯ ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಗಳೂ ಗಮನಾರ್ಹವಾಗಿ ಕುಂಠಿತಗೊಂಡಿವೆ’ ಎಂದೂ ಹೇಳಿದ್ದಾರೆ.