ದೊಡ್ಡಣಗುಡ್ಡೆ: ನಮಾಜ್ ಮುಗಿಸಿ ಹಿಂದಿರುಗುತ್ತಿದ್ದ ಯುವಕನಿಗೆ ಚೂರಿ ಇರಿತ
ಉಡುಪಿ: ಮಸೀದಿಯಲ್ಲಿ ನಮಾಜ್ ಮುಗಿಸಿ ಹಿಂದಿರುಗುತ್ತಿದ್ದ ಯುವಕನೊರ್ವನಿಗೆ ನಾಲ್ವರ ತಂಡವೊಂದು ಚೂರಿಯಿಂದ ಇರಿದು ಪರಾರಿಯಾದ ಘಟನೆ ದೊಡ್ಡಣಗುಡ್ಡೆಯಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಸ್ಥಳೀಯ ನಿವಾಸಿ ರಫೀಕ್ (23) ಎಂಬಾತನಿಗೆ ಕಡೆಕಾರಿನ ನಾಲ್ವರು ಯುವಕರು ಬಂದು ಚೂರಿಯಿಂದ ತಿವಿದು ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ರಫೀಕ್ ನನ್ನು ಸ್ಥಳೀಯರು ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು, ಯುವಕನ ಸ್ಥಿತಿ ಚಿಂತಾಜನಕವಾದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಕಳುಹಿಸಲಾಗಿದೆಂದು ತಿಳಿದು ಬಂದಿದೆ.
ರಫೀಕ್ ಕಾರೊಂದನ್ನು ಬಾಡಿಗೆಗೆ ಪಡೆದುಕೊಂಡು ಹೋಗಿದ್ದ ವಿಷಯಕ್ಕೆ ಕಳೆದ ಡಿ.31 ರಂದು ಮಣಿಪಾಲದಲ್ಲಿ ಎರಡು ತಂಡಗಳ ನಡುವೆ ಗಲಾಟೆಯಾಗಿತ್ತು. ಇದೇ ವಿಚಾರವಾಗಿ ಇಂದು ರಾತ್ರಿ ಕಡೆಕಾರಿನ ದೀಲಿಪ್, ನಿತಿನ್ ಮತ್ತಿಬ್ಬರು ಸೇರಿಕೊಂಡು ರಫೀಕ್ ದೊಡ್ಡಣಗುಡ್ಡೆ ಮಸೀದಿಯಲ್ಲಿ ನಮಾಜ್ ಮುಗಿಸಿ ಹೋರ ಬರುತ್ತಿದ್ದಂತೆ ಚೂರಿಯಲ್ಲಿ ಇರಿದು ಪರಾರಿಯಾಗಿದ್ದರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ತಕ್ಷಣ ಕಾರ್ಯಪ್ರವೃತ್ತರಾದ ಉಡುಪಿ ನಗರ ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆಂದು ಮಾಹಿತಿ ಇದೆ.