ಹೆದರಿ ಓಡಿಹೋಗುವುದಿಲ್ಲ, ಕಾನೂನಿಗೆ ಗೌರವ ಕೊಡುತ್ತೇನೆ:ಡಿಕೆ‌ ಶಿವಕುಮಾರ್

ಬೆಂಗಳೂರು: ತಾವು ಹೆದರಿಕೊಂಡು ಓಡಿಹೋಗುವ ಪ್ರಶ್ನೆಯೇ ಇಲ್ಲ, ಕೆಂಪೇಗೌಡನ ಮಗನಾಗಿ ಎಲ್ಲಿಯೂ ತಪ್ಪಿಸಿಕೊಂಡು ಹೋಗುವುದಿಲ್ಲ, ಕಾನೂನಾತ್ಮಕವಾಗಿ ರಾಜಕೀಯವಾಗಿ, ಸಾಮಾಜಿಕವಾಗಿ ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತೇನೆ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ ಕೆ‌ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಬಂದಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳು ವಿಚಿತ್ರವಾಗಿ ಕಲ್ಪನೆ ಮಾಡಿಕೊಂಡು ನನ್ನ ಬಗ್ಗೆ ವ್ಯಾಖ್ಯಾನ ಮಾಡಿವೆ. ನಾನು ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಕಾರ್ಯಕರ್ತನಾಗಿ ಜವಾಬ್ದಾರಿ ನಿರ್ವಹಿಸಿದ್ದೇನೆ. ಗುಜರಾತ್, ಮಹಾರಾಷ್ಟ್ರ ಹಾಗೂ ನಮ್ಮ ಶಾಸಕರನ್ನು‌ ಕಾಪಾಡುವ ಜವಾಬ್ದಾರಿ ವಹಿಸಿದ್ದೆ. ಪಕ್ಷದ ಸೂಚನೆ ಪ್ರಕಾರ ಕೆಲಸ ಮಾಡಿದ್ದೇನೆ. ನನ್ನ ಮೇಲೆ ಐಟಿ ಅಧಿಕಾರಿಗಳು, ‌ಕೇಂದ್ರ ಪೊಲೀಸ್ ‌ಪಡೆ‌ ತಂದು ದಾಳಿ ನಡೆಸಿದ್ದರು ಎಂದರು.

ನಾನು ಕಾನೂನಿಗೆ ಗೌರವ ಕೊಡುವ ಶಾಸಕ. ‌ನನಗೆ ಬಂದಿರುವ ಎಲ್ಲ ‌ನೋಟೀಸ್ ಗೆ ಉತ್ತರ ನೀಡಿದ್ದೇನೆ. ಸಾಮಾನ್ಯ ಮಧ್ಯಮ ಕುಟುಂಬದ ನಮ್ಮ ಹಾಗೂ ನಮ್ಮ ತಾಯಿಯವರ ಆಸ್ತಿಯನ್ನು ಬೇನಾಮಿ‌ ಆಸ್ತಿ ಎಂದು ಐಟಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ.‌ ನಮ್ಮ ನಿವಾಸದಲ್ಲಿ ದೊರೆತ ಹಣ ನಮ್ಮದು ಎಂದು ಐಟಿ ಇಲಾಖೆಗೆ ಸ್ಪಷ್ಟಪಡಿಸಿದ್ದೇವೆ.‌ ಆದರೆ ಇ.ಡಿ ಸಮನ್ಸ್ ನೀಡಿದೆ. ‌ ಇ.ಡಿ.ಗೂ ಐಟಿ ವ್ಯವಹಾರಕ್ಕೂ ಸಂಬಂಧವಿಲ್ಲ.‌ ಹೀಗಾಗಿ ನಾನು ಕೋರ್ಟ್ ‌ಮೊರೆ ಹೋಗಿದ್ದೆ. ಕೋರ್ಟ್ ನನ್ನ ಮನವಿ ವಜಾ ಮಾಡಿದೆ. ಇದೀಗ ಮತ್ತೆ ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದರು.

ಇಡಿ ಸಮನ್ಸ್ ನೀಡಿದೆ. ವಿಚಾರಣೆಗೆ ಹಾಜರಾಗಲು ಸಿದ್ಧನಿದ್ದೇನೆ. ಆದರೆ ಕಾನೂನಿನಲ್ಲಿರುವ ರಕ್ಷಣೆ ಉಪಯೋಗಿಸಲು ನನಗೆ ಅವಕಾಶವಿರುವುದರಿಂದ ಪ್ರಯತ್ನ ಮಾಡಿದ್ದೇನೆ ಎಂದರು.
ನಾನು ಯಾವ ತಪ್ಪನ್ನೂ ಮಾಡಿಲ್ಲ. ಲಂಚವನ್ನೂ ತಿಂದಿಲ್ಲ. ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ. ಅದನ್ನು ಕಾನೂನಿನ ಮೂಲಕ ಎದುರಿಸುತ್ತೇನೆ, ನಾನು ಯಾವುದಕ್ಕೂ ‌ಹೆದರಿ ಎಲ್ಲಿಯೂ ಓಡಿ ಹೋಗುವುದಿಲ್ಲ. ‌ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತೇನೆ ಎಂದರು.

ಆಪರೇಷನ್ ಕಮಲದಲ್ಲಿ ಕೋಟ್ಯಂತರ ‌ರೂ. ವ್ಯವಹಾರ ನಡೆದಿದೆ. ವಿಧಾನಸಭೆಯಲ್ಲಿ ಶಾಸಕ ಶ್ರೀನಿವಾಸ ಗೌಡ ಬಹಿರಂಗವಾಗಿ ಆಮಿಷದ ಬಗ್ಗೆ ಹೇಳಿದ್ದಾರೆ. ಒಬ್ಬರಿಗೊಂದು ನ್ಯಾಯ ಇನ್ನೊಬ್ಬರಿಗೆ ಮತ್ತೊಂದು ನ್ಯಾಯ ಎಂದು ಕಿಡಿಕಾರಿದ ಅವರು, ಸಾಕ್ಷಿ ಪುರಾವೆ ಇದ್ದರೂ ಇಡಿ ಅಧಿಕಾರಿಗಳು ಏಕೆ ಸುಮ್ಮನಿದ್ದಾರೆ ? ಎಂದು ಪ್ರಶ್ನಿಸಿದರು.
ಜಾರಿ ನಿರ್ದೇಶನಾಲಯ ಸೇರಿದಂತೆ ‌ಯಾವುದೇ ಸಂಸ್ಥೆಗಳು ತನಿಖೆ ನಡೆಸಿದರೂ ಅದನ್ನು ಎದುರಿಸಲು ‌ಸಿದ್ಧ, ನಾವು ಮಾಡಿರುವ ಕಾನೂನಿಗೆ ನಾವೇ ಗೌರವ ಕೊಡದಿರಲು‌ ಸಾಧ್ಯವಿಲ್ಲ. ಕಾನೂನಿನ ಚೌಕಟ್ಟಿನೊಳಗೆ ಸಹಕರಿಸುತ್ತೇನೆ ಎಂದರು.

ಬಹಳಷ್ಟು ಚುನಾವಣೆಗಳನ್ನು ನಾನು ಎದುರಿಸಿದ್ದೇನೆ, ಹಲವಾರು ಚುನಾವಣೆಗಳು, ಉಪಚುನಾವಣೆಗಳು, ರಾಜ್ಯಸಭಾ ಚುನಾವಣೆಗಳಲ್ಲಿ ಕೆಲಸ ಮಾಡಿದ್ದೇನೆ. ಐಟಿ ರೈಡ್ ನನ್ನ ಕರ್ತವ್ಯಕ್ಕೆ ಮುಳ್ಳು ತಂದಿದೆ ಎಂದು ನಾನು ಭಾವಿಸುವುದಿಲ್ಲ ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಅಧಿಕಾರಕ್ಕೆ ಬಂದ ದಿನದಿಂದಲೇ ದ್ವೇಷ ಸಾಧಿಸಲಾರಂಭಿಸಿದ್ದಾರೆ. ಕಾಂಗ್ರೆಸ್ – ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ , ಅಭಿವೃದ್ಧಿ ಕಾರ್ಯಗಳನ್ನು ತಡೆಹಿಡಿಯಲಾಗುತ್ತಿದೆ. ಕುಮಾರಸ್ವಾಮಿ ಮೈತ್ರಿ ಸರ್ಕಾರದಲ್ಲಿ ಮಂಜೂರಾಗಿದ್ದ ತಮ್ಮ ಕನಸಿನ
ಕನಕಪುರ ಮೆಡಿಕಲ್ ಕಾಲೇಜನ್ನು ಯಡಿಯೂರಪ್ಪ ರದ್ದು ಮಾಡಿದ್ದಾರೆ.

ನನ್ನ ಕ್ಷೇತ್ರದಲ್ಲಿ ವೈದ್ಯಕೀಯ ಕಾಲೇಜು ತೆರೆಯುವುದು ನನ್ನ ಜೀವನದ ಕನಸಾಗಿತ್ತು. ಆದರೆ ಯಡಿಯೂರಪ್ಪ ಏಕಾಂಗಿಯಾಗಿಯೇ ಸಂಪುಟದಲ್ಲಿ ಮೆಡಿಕಲ್ ಕಾಲೇಜ್ ರದ್ದು ಪಡಿಸಿ ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಯಡಿಯೂರಪ್ಪ ನನಗೆ ಹೇಳಿದ್ದ ಕೆಲಸಗಳನ್ನೆಲ್ಲವನ್ನೂ ಮಾಡಿದ್ದೇನೆ. ಎಲ್ಲಾ ವಿರೋಧ ಪಕ್ಷಗಳ ಶಾಸಕರ ಕೆಲಸ ಮಾಡಿದ್ದೇನೆ. ಯಡಿಯೂರಪ್ಪ ಈ ರೀತಿಯ ಕೆಲಸ ಮಾಡುತ್ತಾರೆ ಎಂದು ನಾನು ನಂಬಿರಲಿಲ್ಲ. ಈ ಆದೇಶವನ್ನು ಶನಿವಾರದೊಳಗೆ ರದ್ದು ಪಡಿಸದಿದ್ದರೆ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡುವುದಾಗಿ ಡಿಕೆಶಿ ಎಚ್ಚರಿಸಿದರು.

ನನ್ನ ಜೀವ ಇರುವವರೆಗೂ ರಾಜ್ಯದ ಜನತೆಯ ಪರವಾಗಿ ಹೋರಾಟ ನಿರಂತರವಾಗಿ ನಡೆಸುತ್ತೇನೆ. ನನ್ನನ್ನು ಬೇಕಾದರೆ ಜೈಲಿಗೆ ಹಾಕಲಿ ಎಂದು ಸವಾಲು ಹಾಕಿದ ಅವರು, ಕಾಲಚಕ್ರ ತಿರುಗುತ್ತಲೇ ಇರುತ್ತದೆ. ಭವಿಷ್ಯ ನಾನು ಹೇಳಲು ಹೋಗುವುದಿಲ್ಲ. ಪಕ್ಷದ ಕೆಲಸ ಮಾಡಿದ್ದಕ್ಕಾಗಿ ಹೆಮ್ಮೆ ಇದೆ. ನನಗೆ ಯಾವ ಬಂಧನದ ಭಯವೂ ಇಲ್ಲ ಎಂದು ಹೇಳಿದರು.
ಜಾರಿ ನಿರ್ದೇಶನಾಲಯದ ಸಮನ್ಸ್ ಗೆ ಗೌರವ ಕೊಡುತ್ತೇನೆ. ಒಂದು ಗಂಟೆಯ ವಿಚಾರಣೆಗೆ ನಾನು ಹಾಜರಾಗುತ್ತಿಲ್ಲ. ಸ್ವಲ್ಪ ಕಾಲಾವಕಾಶ ಕೇಳಿದ್ದೇನೆ. ತಡವಾಗಿ ವಿಚಾರಣೆಗೆ ಹಾಜರಾಗಲು ಒಪ್ಪಿಗೆ ಪಡೆದಿದ್ದೇನೆ ಎಂದು ಹೇಳಿದ್ದಾರೆ

Leave a Reply

Your email address will not be published. Required fields are marked *

error: Content is protected !!