ದ.ಕ. ಕೋವಿಡ್–19ಗೆ ಮೊದಲ ಬಲಿ, ಇನ್ನೊಂದು ಕೊರೊನಾ ಪಾಸಿಟಿವ್ ಪತ್ತೆ
ಮಂಗಳೂರು: ಬಂಟ್ವಾಳ ತಾಲ್ಲೂಕಿನ ಕಸಬಾ ಗ್ರಾಮದ ಸುಮಾರು 45 ವರ್ಷದ ಮಹಿಳೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಶನಿವಾರ ಅವರನ್ನು ವೆನ್ಲಾಕ್‌ನಲ್ಲಿರುವ ಕೋವಿಡ್–19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಟಲ ದ್ರವದ ಮಾದರಿಯನ್ನು ಶನಿವಾರವೇ ಪರೀಕ್ಷೆಗೆ ಕಳುಹಿಸಲಾಗಿದ್ದು, ಭಾನುವಾರ ಬೆಳಿಗ್ಗೆ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ಮಧ್ಯಾಹ್ನ ವರದಿ ಬಂದಿದ್ದು, ಮಹಿಳೆಗೆ ಕೋವಿಡ್–19 ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
ಕೋವಿಡ್–19 ನಿಂದ ಮೃತಪಟ್ಟಿರುವುದು ಖಚಿತವಾಗಿದ್ದರಿಂದ ವೈದ್ಯಕೀಯ ಶಿಷ್ಟಾಚಾರದಂತೆ ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡದ ನೇತೃತ್ವದಲ್ಲಿ ಮಹಿಳೆಯ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿಸಿದ್ದಾರೆ.
ಉಪ್ಪಿನಂಗಡಿ ತಾಲೂಕಿನಲ್ಲಿ ಈ ಹಿಂದೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದ ವ್ಯಕ್ತಿಯ ಪತ್ನಿಯಲ್ಲಿ ಇದೀಗ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಇದೀಗ ಆತಂಕ ಹೆಚ್ಚಾಗಿದೆ. 12 ದಿನಗಳಲ್ಲಿ ದ.ಕ. ಜಿಲ್ಲೆಯಲ್ಲಿ ಯಾವುದೇ ಕೊರೊನಾ ಸೋಂಕು ಪತ್ತೆಯಾಗಿರಲಿಲ್ಲ. ಅದರ ಬಳಿಕ ಏಪ್ರಿಲ್ 17ರಂದು ಉಪ್ಪಿನಂಗಡಿ ಮೂಲದ ವ್ಯಕ್ತಿಯಲ್ಲಿ ಪಾಸಿಟಿವ್ ಪತ್ತೆಯಾಗಿತ್ತು. ಬಳಿಕ ವೆನ್ಲಾಕ್ ಆಸ್ಪತ್ರೆಯಲ್ಲಿ ಅವರಿಗೆ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.