ಕೆಪಿಸಿಸಿ ಅಧ್ಯಕ್ಷ ಪಟ್ಟ ಒಲಿದು ಬಂತು ಡಿ.ಕೆ.ಶಿವಕುಮಾರ್ ಗೆ
ನವದೆಹಲಿ: ಡಿ.ಕೆ.ಶಿವಕುಮಾರ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗಿದೆ. ಅದೇ ರೀತಿ ಕಾರ್ಯಧ್ಯಕ್ಷ ಹುದ್ದೆಯನ್ನು ದಲಿತ, ಲಿಂಗಾಯತ, ಅಲ್ಪಸಂಖ್ಯಾತ ಸಮುದಾಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈಶ್ವರ್ ಖಂಡ್ರೆ, ಸತೀಶ್ ಜಾರಕಿ ಹೊಳಿ ,ಸಲೀಮ್ ಅಹಮ್ಮದ್‌ರನ್ನು ನೇಮಿಸಲಾಗಿದೆ.
ಅದೇ ರೀತಿ ವಿರೋಧ ಪಕ್ಷದ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಮುಂದುವರಿಯಲಿದ್ದಾರೆ.
ಕಾರ್ಯಾಧ್ಯಕ್ಷರಾಗಿ ಈಶ್ವರ ಖಂಡ್ರೆ (ಲಿಂಗಾಯತ), ಸತೀಶ್ ಜಾರಕಿಹೊಳಿ (ವಾಲ್ಮೀಕಿ ಸಮುದಾಯ), ಸಲೀಂ ಅಹಮದ್ (ಅಲ್ಪಸಂಖ್ಯಾತ) ಅವರನ್ನು ನೇಮಿಸಲಾಗಿದೆ. ಲಿಂಗಾಯತ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಆದ್ಯತೆ ನೀಡುವ ತಂತ್ರಗಾರಿಕೆಯನ್ನು ಕಾಂಗ್ರೆಸ್ ಹೈಕಮಾಂಡ್ ಪ್ರದರ್ಶಿಸಿದೆ.
ಉಪ ಚುನಾವಣೆ ಫಲಿತಾಂಶದ ಬಳಿಕ ದಿನೇಶ್ ಗುಂಡೂರಾವ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಶಿವಕುಮಾರ್ ನೇಮಕಗೊಳಿಸಿರುವ ಹೈಕಮಾಂಡ್, ದಿನೇಶ್ ಗುಂಡೂರಾವ್ ರಾಜೀನಾಮೆ ಅಂಗೀಕರಿಸಿದ್ದು, ವಿಧಾನ ಪರಿಷತ್‌ಗೆ ನಾರಾಯಣಸ್ವಾಮಿ ಮತ್ತು ವಿಧಾನಸಭೆಗೆ ಅಜಯ್ ಸಿಂಗ್ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಲಾಗಿದೆ.
ಮಧುಸೂದನ್ ಮಿಸ್ತ್ರಿ ನೇತೃತ್ವದ ಹೈಕಮಾಂಡ್ ನಾಯಕರ ನಿಯೋಗ ರಾಜ್ಯಕ್ಕೆ ಆಗಮಿಸಿ ಕೆಪಿಸಿಸಿ ಅಧ್ಯಕ್ಷರು ಯಾರಾಗಬೇಕು? ಎಂದು ವಿವಿಧ ನಾಯಕರ ಅಭಿಪ್ರಾಯ ಸಂಗ್ರಹ ಮಾಡಿತ್ತು. ಕೆಪಿಸಿಸಿ ಅಧ್ಯಕ್ಷ ಸ್ಥಾನದ ನೇಮಕದೊಂದಿಗೆ ಹಲವು ತಿಂಗಳುಗಳಿಂದ ಉಂಟಾಗಿದ್ದ ನಾಯಕತ್ವ ಬಿಕ್ಕಟ್ಟು ಶಮನಗೊಂಡಂತಾಗಿದೆ.