ದ.ಕ: ಅಗತ್ಯ ಎನಿಸಿದರೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವ ಕೋಟ ಸೂಚನೆ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಅಗತ್ಯ ಎನಿಸಿದರೆ ಜಿಲ್ಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.
ಬಂಟ್ವಾಳ ತಾಲ್ಲೂಕಿನ ಕಸಬಾ ಪ್ರದೇಶದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌–19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಸಚಿವರು ಹಾಗೂ ಸಂಸದರ ನೇತೃತ್ವದಲ್ಲಿ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಬಂಟ್ವಾಳದಲ್ಲಿ ಮೇ 3ರವರೆಗೆ ಲಾಕ್‌ಡೌನ್‌ನಲ್ಲಿ ಯಾವುದೇ ವಿನಾಯಿತಿ ಇಲ್ಲ. ಕಸಬಾ ಹೋಬಳಿಯ 92 ಮನೆಗಳು ಹಾಗೂ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ 213 ಮನೆಗಳಲ್ಲಿ ನಿತ್ಯ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ, ವರದಿ ಸಲ್ಲಿಸಬೇಕು ಎಂದು ತಿಳಿಸಿದರು.

ಬಂಟ್ವಾಳ ಕಸಬಾ ಹಾಗೂ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಮಾಡಲಾಗಿದ್ದು, ಸಾರ್ವಜನಿಕರ ಅನುಕೂಲಕ್ಕೆ ದೂರವಾಣಿ ಸಂಪರ್ಕ ನೀಡಲಾಗಿದೆ. 11 ಅಧಿಕಾರಿಗಳನ್ನು ಈ ಪ್ರದೇಶದಲ್ಲಿ ಹಗಲು-ರಾತ್ರಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸಾರ್ವಜನಿಕರು ಮನೆಯಲ್ಲಿ ಇದ್ದುಕೊಂಡು ಅಗತ್ಯ ಸಾಮಗ್ರಿಗಳನ್ನು ತೆಗೆದುಕೊಳ್ಳಬಹುದು.

ದಿನಸಿ ಸಾಮಗ್ರಿ, ಹಾಲು, ದಿನಪತ್ರಿಕೆ, ಔಷಧಿ, ಊಟೋಪಚಾರ, ತರಕಾರಿ, ಹಣ್ಣು, ಮಾಂಸಗಳನ್ನು ಸಾರ್ವಜನಿಕರ ಬೇಡಿಕೆಯಂತೆ ಒದಗಿಸಲು ಹಾಗೂ ಬ್ಯಾಂಕಿಂಗ್ ಸೇವೆ, ಗ್ಯಾಸ್ ಇನ್ನಿತರ ತುರ್ತು ಸೇವೆಗಳನ್ನು ಒದಗಿಸಲು ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ ಎಂದರು.

ಸಂಸದ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ಅಧಿಕಾರಿಗಳು ಕಟ್ಟೆಚ್ಚರದಿಂದ ಕಾರ್ಯನಿರ್ವಹಿಸಬೇಕು. ವಲಸೆ ಕಾರ್ಮಿಕರು ಹಾಗೂ ಜಿಲ್ಲೆಯ ಸಮಸ್ಯೆಗಳಿಗೆ ತಕ್ಷಣ ಪರಿಹರಿಸಬೇಕು. ಆಹಾರಗಳ ಪೂರೈಕೆ ಸೇರಿದಂತೆ ಸ್ಥಳೀಯ ಶಾಸಕರು ಸಹಕಾರ ನೀಡಲಿದ್ದಾರೆ ಎಂದು ಹೇಳಿದರು.

ಶಾಸಕ ರಾಜೇಶ್ ನಾಯಕ್, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಉಪ ವಿಭಾಗಾಧಿಕಾರಿ ಮದನ್ ಮೋಹನ್, ತಹಶೀಲ್ದಾರ್ ರಶ್ಮಿ ಎಸ್.ಆರ್., ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು, ಇನ್‌ಸ್ಪೆಕ್ಟರ್‌ ಟಿ.ಡಿ.ನಾಗರಾಜ್ ಉಪಸ್ಥಿತರಿದ್ದರು.

‘ಕೊರೊನಾ ನಿಯಂತ್ರಣಕ್ಕೆ ಕಣ್ಗಾವಲು’

ಜಿಲ್ಲಾಡಳಿತದ ಪೂರ್ಣ ಕಣ್ಗಾವಲಿನಲ್ಲಿ ಕೊರೊನಾ ನಿಯಂತ್ರಣ ಮಾಡಲಾಗುತ್ತಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೆ ಪ್ರಕರಣವನ್ನು ಲಘುವಾಗಿ ತೆಗೆದುಕೊಳ್ಳದೇ, ಸ್ವಯಂಪ್ರೇರಿತ ಕರ್ಫ್ಯೂಗೆ ಒಳಪಡಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು.

ಜಿಲ್ಲೆಯಲ್ಲಿ ಒಟ್ಟು 19 ಮಂದಿಗೆ ಕೋವಿಡ್‌–19 ದೃಢಪಟ್ಟಿದ್ದು, ಇದರಲ್ಲಿ 12 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇಬ್ಬರು ಮೃತಪಟ್ಟಿದ್ದು, ಉಳಿದ ಪ್ರಕರಣಗಳಲ್ಲಿ ನಿಗಾ ವಹಿಸಲಾಗಿದೆ ಎಂದರು. 

Leave a Reply

Your email address will not be published. Required fields are marked *

error: Content is protected !!