ಲಾಭಾಂಶ ವರ್ಗಾವಣೆಯಲ್ಲಿ ದ.ಕ. ಹಾಲು ಒಕ್ಕೂಟ ಮಾದರಿಯಾಗಲಿ: ಜಿ.ಜಗದೀಶ್

ಉಡುಪಿ: ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಲಾಭಾಂಶ ವರ್ಗಾವಣೆ
ಮಾಡುವುದರಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ದಿ ಹೊಂದಿ ಲಾಭಾಂಶ ವರ್ಗಾವಣೆಯಲ್ಲಿ ಜಿಲ್ಲೆಯು ದೇಶಕ್ಕೇ ಮಾದರಿಯಾಗಿ ಹೊರಹೊಮ್ಮಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅಭಿಪ್ರಾಯಪಟ್ಟರು.

ಮಂಗಳವಾರ ಡಾ.ವರ್ಗೀಸ್ ಕುರಿಯನ್ ಜನ್ಮ ದಿನಾಚರಣೆಯ ಪ್ರಯುಕ್ತ ಅಜ್ಜರಕಾಡು ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಹಾಲು ದಿನಾಚರಣೆ ಅಂಗವಾಗಿ ಶುದ್ದ ಹಾಲು ಉತ್ಪಾದನೆಯ ಮಹತ್ವ ಮತ್ತು ಮೇಘ ತಂತ್ರಜ್ಞಾನ ಸಾಫ್ಟ್‍ವೇರ್
ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಾಲಿನ ಕೊರತೆಯಿಂದ ಹಾಲಿನ ಪ್ರವಾಹದವರೆಗೆ ಭಾರತ ಮಾಡಿರುವ ಸಾಧನೆ ಅದ್ಭುತ, ಇಂತಹ ಅದ್ಭುತವನ್ನು ಸಾಧಿಸಲು ಕಾರಣೀಕರ್ತರಾದ ಮಹನೀಯರನ್ನು ನೆನೆಯದಿದ್ದರೆ ಕಾರ್ಯಕ್ರಮ ಸಾರ್ಥಕತೆಯನ್ನು ಕಾಣುವುದಿಲ್ಲ. ಡಾ.ವರ್ಗೀಸ್ ಕುರಿಯನ್
ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದು ಕ್ಷೀರಕ್ರಾಂತಿಯ ಮೂಲಕ ರೈತರು ಇಂದು ಸ್ವಾಭಿಮಾನದ ಬದುಕನ್ನು ಬದುಕುತ್ತಿದ್ದಾರೆ.

ಪ್ರಪಂಚದಲ್ಲೇ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ದೇಶ ಭಾರತ. 1970 ರ ಕ್ಷೀರಕ್ರಾಂತಿಗೂ ಮೊದಲು ನಾವು ಹಾಲಿನ ಉತ್ಪನ್ನಗಳನ್ನು ಹೊರದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೆವು, ಆದರೆ ಈಗ ಹಾಲಿನ ಉತ್ಪನ್ನಗಳನ್ನು ಹೊರದೇಶಗಳಿಗೆ ರಫ್ತು ಮಾಡುವ ಹಂತಕ್ಕೆ ತಲುಪಿದ್ದೇವೆ. ಈ ಸಾಧನೆಗೆ ಕಾರಣರಾದವರೆಲ್ಲರನ್ನೂ ಅಭಿನಂದಿಸುತ್ತೇನೆ ಎಂದರು.

ಹಾಲು ಅಮೃತ ಸಮಾನ ಎನ್ನುತ್ತೇವೆ, ಆದರೆ ಇದೇ ಹಾಲಿಗೆ ವಿಷ ಬೆರೆಸುವಂತಹ ಕುಕೃತ್ಯಗಳನ್ನೂ ಹಲವರು ಮಾಡುತ್ತಿದ್ದಾರೆ. ಇಂತಹ ಕೆಲಸ ಮಾಡುವವರನ್ನು ಗುರುತಿಸಿ ಮಟ್ಟಹಾಕಬೇಕು. ರೈತ ಮಹಿಳೆಯೊಬ್ಬಳು ಕೂಡಾ ಸೆಲೆಬ್ರಿಟಿ ಆಗಬಹುದೆನ್ನುವುದನ್ನು ಕವಿತಾ ಮಿಶ್ರಾ ತೋರಿಸಿಕೊಟ್ಟಿದ್ದಾರೆ. ದೇಶದ ಯಾವುದೇ ಮೂಲೆಗೆ ಹೋದರೂ ಅವರ
ಸಾಧನೆಯನ್ನು ಗುರುತಿಸಿ ಹೊಗಳುತ್ತಾರೆ. ಅವರ ಸಾಧನೆ ಎಲ್ಲ ರೈತರಿಗೂ ಮಾದರಿಯಾಗಲಿ. ಜಿಲ್ಲೆಯಲ್ಲಿ ಹಾಲಿನ ಉತ್ಪನ್ನಗಳ ಮಳಿಗೆಯನ್ನು ಸ್ಥಾಪಿಸಲು ಜಾಗ ಗುರುತಿಸಲು ಈಗಾಗಲೇ ನಗರಸಭೆಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಮೇಘ ತಂತ್ರಜ್ಞಾನ ಆಧರಿಸಿ ಅಭಿವೃದ್ದಿ ಪಡಿಸಿದ ಮಿಲ್ಕೊ ಸಾಫ್ಟ್‍ವೇರ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದ ರಾಷ್ಟ್ರಪಶಸ್ತಿ ವಿಜೇತ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ, ರೈತರು ಸ್ವಾಭಿಮಾನದಿಂದ ಬದುಕಬೇಕು.

ಯಾವ ಕೆಲಸವೂ ಕೀಳಲ್ಲ. ಜೀವನದಲ್ಲಿ ಸವಾಲುಗಳನ್ನು ಎದುರಿಸಿ ಸಾಧನೆ ಮಾಡಬೇಕು. ಒಂದೇ ಬೆಳೆಯನ್ನು ಆಶ್ರಯಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ನಷ್ಟ ಅನುಭವಿಸುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಋತು ಆಧಾರಿತ ಮತ್ತು ಮಿಶ್ರಬೆಳೆ ಆಧಾರಿತ ಕೃಷಿ ಮಾಡಿದಾಗ ಇನ್ನಿತರ ಉದ್ಯೋಗಗಳಂತೆಯೆ ಪ್ರತೀ ತಿಂಗಳೂ ನಿಗದಿತ ಆದಾಯ ಬರುವಂತಾಗುತ್ತದೆ. ಕೃಷಿಯ ಜೊತೆಗೆ ಹೈನುಗಾರಿಕೆ, ಕೋಳಿ ಸಾಕಣೆ, ಕುರಿ ಸಾಕಣೆ ಮುಂತಾದ ಉಪಕಸುಬುಗಳಲ್ಲಿಯೂ ತೊಡಗಿಸಿಕೊಂಡಾಗ ರೈತರ ಆದಾಯಕ್ಕೆ
ಯಾವುದೇ ಅಡ್ಡಿ ಬರುವುದಿಲ್ಲ. ಶ್ರೀಗಂಧ ಒಂದು ಆದಾಯಕರ ಬೆಳೆಯಾಗಿದ್ದು, ರೈತರು ತಮ್ಮ ಜಮೀನಿನಲ್ಲಿ ಶ್ರೀಗಂಧ ಬೆಳೆದು ಕೋಟ್ಯಂತರ ರೂಪಾಯಿ ಆದಾಯ ಪಡೆದುಕೊಳ್ಳಬಹುದು ಎಂದು ಹೇಳಿದರು.


ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ವಿ.ಹೆಗಡೆ ಪ್ರಾಸ್ತಾವಿಕ ಮಾತುಗಳನ್ನಾಡಿ ದ.ಕ ಹಾಲು ಒಕ್ಕೂಟದ 725 ಸಹಕಾರ ಸಂಘಗಳ ಪೈಕಿ 648 ಸಹಕಾರ ಸಂಘಗಳಲ್ಲಿ ಸ್ವಯಂಚಾಲಿತ ಹಾಲು ಸಂಗ್ರಹಣಾ ಘಟಕಗಳಿವೆ. ಈ ಘಟಕಗಳು ಪ್ರಸ್ತುತ ಬಳಸುತ್ತಿರುವ ಸಾಫ್ಟ್‍ವೇರ್‍ನಲ್ಲಿ ಕೆಲವು ನ್ಯೂನತೆಗಳಿದ್ದುದ್ದರಿಂದ, ಒಕ್ಕೂಟವು ತನ್ನದೇ ಆದ ಮೇಘ ತಂತ್ರಜ್ಞಾನ ಆಧಾರಿತ ಸಾಫ್ಟವೇರ್‍ಅನ್ನು ಅಭಿವೃದ್ದಿ ಪಡಿಸಿದೆ. ಮುಂದಿನ ದಿನಗಳಲ್ಲಿ ಮಾಹಿತಿಗಳನ್ನು ಹೈನುಗಾರರ ಮೊಬೈಲಿಗೆ ತಲುಪಿಸುವ ವ್ಯವಸ್ಥೆಯನ್ನು ಸಾಫ್ಟವೇರ್‍ನಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಅಂತೆಯೇ ಇ-ಕಾಮರ್ಸ್ ಮೂಲಕ ಒಕ್ಕೂಟದ ಉತ್ಪನ್ನಗಳನ್ನು ಗ್ರಾಹಕರ ಮನೆಗೆ ತಲುಪಿಸಲು ಅಪ್ಲಿಕೇಶನ್‍ಅನ್ನು ಕೂಡಾ ಅಭಿವೃದ್ದಿ ಪಡಿಸಲಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ್ ಹೆಗ್ಡೆ, ಕಾಪು ದಿವಾಕರ್
ಹೆಗ್ಡೆ, ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಐರೋಡಿ ಜಗದೀಶ ಕಾರಂತ, ಮಹಿಳಾ ಒಕ್ಕೂಟದ ನಿರ್ದೇಶಕಿ ಸ್ಮಿತಾ. ಆರ್.ಶೆಟ್ಟಿ ಮತ್ತು ವಿವಿಧ ಒಕ್ಕೂಟಗಳ ಕಾರ್ಯಕಾರಿ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.


ಡಾ.ವರ್ಗೀಸ್ ಕುರಿಯನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಶುದ್ಧ ಹಾಲು ಉತ್ಪಾದನೆಯ ಮಹತ್ವದ ಬಗ್ಗೆ ಪ್ರಾಂತೀಯ ಡೈರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರಾಮಚಂದ್ರ. ಬಿ ಉಪನ್ಯಾಸ ನೀಡಿದರು. ಡೀಲರ್‍ಗಳ ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ವಿತರಣೆ ನಡೆಸಲಾಯಿತು. ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ವಿಜೇತರಾದ ಶಂಕರನಾರಾಯಣ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ದಯಾನಂದ ರಾವ್ ಅವರನ್ನು ಸನ್ಮಾನಿಸಲಾಯಿತು. ದಕ್ಷಿಣ ಕನ್ನಡ ಹಾಲು ಒಕ್ಕೂಟ ನಿಗಮದ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಸಹಾಯಕ ವ್ಯವಸ್ಥಾಪಕ ಸುಧಾಕರ್ ಮತ್ತು ಜಾನೆಟ್ ರೋಸಾರಿಯೋ ನಿರೂಪಿಸಿದರು. ಒಕ್ಕೂಟದ ವ್ಯವಸ್ಥಾಪಕ ಡಾ.ನಿತ್ಯಾನಂದ ಭಕ್ತ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!