ಸ್ತ್ರೀ ಶಕ್ತಿ ಸದಸ್ಯರ ಸಾಲ ಮನ್ನಾಕ್ಕೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಆಗ್ರಹ

ಉಡುಪಿ: ಕರ್ನಾಟಕ ರಾಜ್ಯದಾದ್ಯಂತ ಕಾರ್ಯಾಚರಿಸುತ್ತಿರುವ ಸ್ತ್ರೀ ಶಕ್ತಿ ಯೋಜನೆಯ ಸ್ವಸಹಾಯ ಗುಂಪುಗಳಲ್ಲಿ ತೊಡಗಿಸಿಕೊಂಡಿರುವವರಲ್ಲಿ ಶೇ.80ಕ್ಕೂ ಹೆಚ್ಚು ಮಹಿಳೆಯರು ಬಡ ಹಾಗೂ ಮಧ್ಯಮ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಅಲ್ಲದೇ ಈ ಮಹಿಳೆಯರಲ್ಲಿ ಅಧಿಕ ಮಂದಿ ಅತ್ಯಂತ ಬಡ ಕೃಷಿ ಕೂಲಿ ಕಾರ್ಮಿಕರು,ಬೀಡಿ ಕಾರ್ಮಿಕರು, ಗಾರ್ಮೆಂಟ್ಸ್ ಹಾಗೂ ಗೇರುಬೀಜ ಕಾರ್ಖಾನೆಗಳಲ್ಲಿ ದಿನಗೂಲಿ ನೌಕರರಾಗಿ ದುಡಿಯುತ್ತಿದ್ದಾರೆ.

ಈ ರೀತಿ ದುಡಿದು,ಬಂದ ಅತ್ಯಲ್ಪ ಸಂಪಾದನೆಯಲ್ಲಿ ತಮ್ಮ ಕುಟುಂಬಕ್ಕೆ ನೆರವಾಗುವುದರ ಜೊತೆಗೆ ತಾವು ಸ್ತ್ರೀ ಶಕ್ತಿ ಸಂಘದ ಮೂಲಕ ಪಡೆದಿರುವ ಸಾಲವನ್ನು ಅತ್ಯಂತ ಪ್ರಾಮಾಣೀಕತೆಯಿಂದ ಮರುಪಾವತಿಸುತ್ತಾ ಬಂದಿದ್ದಾರೆ.ಈ ಲಾಕ್ ಡೌನ್ ಸಂದರ್ಭದಲ್ಲಿ ಈ ಮಹಿಳೆಯರ ಬಗ್ಗೆ ಯಾರೊಬ್ಬರೂ ಗಮನ ಹರಿಸದೇ ಇರುವುದು ದೊಡ್ಡ ದುರಂತವೇ ಸರಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಹೇಳಿದ್ದಾರೆ.

ತಮ್ಮ ಉದ್ಯೋಗಗಳನ್ನು ಕಳೆದುಕೊಂಡು , ಆರ್ಥಿಕವಾಗಿ ಯಾವ ಸಂಪನ್ಮೂಲವೂ ಇಲ್ಲದೇ ಕೈಸಾಲ ಪಡೆದುಕೊಂಡು ಬದುಕು ಸಾಗಿಸುವ ದುಸ್ಥಿತಿ ಅವರದಾಗಿದೆ.ಈ ಪರಿಸ್ಥಿತಿ ಯಿಂದ ಹೊರಬರಲು ಈ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರಿಗೆ ಹಲವು ವರ್ಷಗಳೇ ಬೇಕಾಗಬಹುದು. ಇದೀಗ ಮದ್ಯದ ಅಂಗಡಿಗಳನ್ನು ತೆರೆಯಲು ಸರ್ಕಾರವು ಅವಕಾಶ ಮಾಡಿಕೊಟ್ಟಿರುವುದರಿಂದ ಬಹುತೇಕ ಕುಟುಂಬಗಳು ಬೀದಿಗೆ ಬರಲಿವೆ . ಏತನ್ಮಧ್ಯೆ ತಮ್ಮ ಗುಂಪುಗಳ ಮೂಲಕ ಸಾಲ ಪಡೆದಿರುವ ಸಾಲವನ್ನು ಮರುಪಾವತಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯ. ಆದ್ದರಿಂದ ರಾಜ್ಯದಾದ್ಯಂತ ಸ್ತ್ರೀ ಶಕ್ತಿ ಸದಸ್ಯರು ಪಡೆದಿರುವ ಸಾಲಗಳನ್ನು ಮನ್ನಾ ಮಾಡಬೇಕಾಗಿ ಒತ್ತಾಯಿಸಿದ್ದಾರೆ.

ದೊಡ್ಡ ದೊಡ್ಡ ಶ್ರೀಮಂತರ ಕೋಟಿಗಟ್ಟಲೆ ಸಾಲವನ್ನು ಕೇಂದ್ರ ಸರ್ಕಾರವು ಮನ್ನಾ ಮಾಡಿರುವಾಗ ಈ ಬಡ ಮಹಿಳೆಯರು ಪಡೆದಿರುವ ಅಲ್ಪ ಮೊತ್ತದ ಸಾಲವನ್ನು ಮನ್ನಾ ಮಾಡುವುದು ರಾಜ್ಯ ಸರ್ಕಾರಕ್ಕೆ ಕಷ್ಟವೇನಲ್ಲ.ಆದ್ದರಿಂದ ತಕ್ಷಣ ಈ ವಿಷಯದ ಬಗ್ಗೆ ಗಮನ ಹರಿಸಿ,ಸಾಲ ಮನ್ನಾ ಬಗ್ಗೆ ಆದೇಶ ಹೊರಡಿಸಬೇಕಾಗಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ವತಿಯಿಂದ ರಾಜ್ಯದ ಎಲ್ಲಾ ಸ್ತ್ರೀ ಶಕ್ತಿ ಸಂಘಗಳ ಸಮಸ್ತ ಬಡವರ ಪರವಾಗಿ ಆಗ್ರಹ.

ಅದೇ ರೀತಿ ಅಂಗನವಾಡಿಯ ಪುಟಾಣಿಗಳಿಗೆ ಸರ್ಕಾರದಿಂದ ವಿತರಿಸಲಾಗುವ ಆಹಾರ ಸಾಮಾಗ್ರಿಗಳ ಪೊಟ್ಟಣಗಳ ಮೇಲೆ ಬಿಜೆಪಿಯ ಕೆಲವು ನಾಯಕರು ತಮ್ಮ ಭಾವಚಿತ್ರ ಹಾಗೂ ಹೆಸರುಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ವಿತರಿಸುವ ಹಗರಣವೊಂದು ಇತ್ತೀಚೆಗೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿರುವುದು ಎಲ್ಲರೂ ತಲೆತಗ್ಗಿಸುವಂತೆ ಮಾಡಿದೆ.ಇಂತಹ ಹಗರಣಗಳು ರಾಜ್ಯದ ಇತರೆಡೆಗಳಲ್ಲೂ ನಡೆದಿರುವಂತಹ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಪುಟ್ಟ ಕಂದಮ್ಮಗಳ ಆಹಾರಕ್ಕೂ ಕನ್ನ ಹಾಕುವುದರ ಮೂಲಕ ಮಕ್ಕಳ ಬದುಕಿನೊಂದಿಗೆ ಚೆಲ್ಲಾಟವಾಡಲು ಹೊರಟಿರುವ ನಾಯಕರ ಈ ಹಗರಣದ ಬಗ್ಗೆ ವಿಸ್ತೃತ ವಾಗಿ ತನಿಖೆ ನಡೆಸಿ, ತಪ್ಪಿತಸ್ಥರು ಯಾರೇ ಆಗಿರಲಿ,ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ.

Leave a Reply

Your email address will not be published. Required fields are marked *

error: Content is protected !!