ಬಾವಿ ಬಳಿಯ ಶೌಚಾಲಯ ಸ್ಥಳಾಂತರಕ್ಕೆ ಜಿಲ್ಲಾಡಳಿತ ನಿರ್ದೇಶನ
ಮಡಿಕೇರಿ : ನಗರದ ವಿವಿಧ ಬಡಾವಣೆಗಳಿಗೆ ಕುಡಿಯುವ ನೀರನ್ನು ಒದಗಿಸುವ ನಗರದ ಕನ್ನಂಡಬಾಣೆ ಬಾವಿ ಬಳಿಯಲ್ಲಿ ನಿರ್ಮಿಸಿರುವ ಶೌಚಾಲಯ ಬಳಕೆಗೆ ತಡೆ ನೀಡಿರುವ ಜಿಲ್ಲಾಡಳಿತ ಶೌಚಾಲಯವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ನಗರಸಭೆಗೆ ಸ್ಪಷ್ಟ ನಿರ್ದೇಶನ ನೀಡಿದೆ.
ನಗರದ ಕನ್ನಂಡಬಾಣೆಯಲ್ಲಿರುವ ಬಾವಿಯಿಂದ ಕನ್ನಂಡಬಾಣೆ, ದೇಚೂರು, ಪುಟಾಣಿನಗರ, ಸುತ್ತಮುತ್ತಲ ಪ್ರದೇಶ ಹಾಗೂ ಜಿಲ್ಲಾ ಆಸ್ಪತ್ರೆಗೂ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆ. ಇಂತಹ ಪ್ರಮುಖ ಜಲಾಗಾರದ ಪಕ್ಕದಲ್ಲೇ ಯಾವುದೇ ಮುಂದಾಲೋಚನೆಗಳಿಲ್ಲದೆ ನಗರಸಭೆ ಶೌಚಾಲಯ ನಿರ್ಮಿಸಿತ್ತು. ಜಲಮೂಲದ ಬಳಿ ಶೌಚಾಲಯ ನಿರ್ಮಿಸಿರುವುದನ್ನು ವಿರೋಧಿಸಿ ನಗರಸಭಾ ಮಾಜಿ ಸದಸ್ಯ ಕೆ.ಜಿ.ಪೀಟರ್ ಅವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಯೋಜನಾ ನಿರ್ದೇಶಕರುಗಳನ್ನು ಸ್ಥಳಕ್ಕೆ ಕಳುಹಿಸಿದರು.