ಯಕ್ಷಧ್ರುವ ಪಟ್ಲ ಫೌಂಡೇಶನ್ ನಿಂದ ಯಕ್ಷಗಾನ ಕಲಾವಿದರಿಗೆ ಕಿಟ್ ವಿತರಣೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ( ರಿ) ಮಂಗಳೂರು ಇದರ ವತಿಯಿಂದ ಕೊರೊನಾ ವೈರಸ್ ನಿರ್ಬಂಧದಿಂದ ಸಂಕಷ್ಟಕ್ಕೆ ಸಿಲುಕಿದ ಯಕ್ಷಗಾನ ಕ್ಷೇತ್ರದಲ್ಲಿ ದುಡಿಯುತ್ತಿರುವ ಸುಮಾರು ಒಂದು ಸಾವಿರ ಕಲಾವಿದರಿಗೆ ಸುಮಾರು 20 ಲಕ್ಷ ರೂಪಾಯಿಗೂ ಮಿಕ್ಕಿದ ಆಹಾರ ಸಾಮಾಗ್ರಿ ಕಿಟ್ ನ್ನು ವಿತರಿಸಲಾಯಿತು.


ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಶಿವಮೊಗ್ಗ, ಕಾಸರಗೋಡು ಮೊದಲಾದ ಜಿಲ್ಲೆಗಳಲ್ಲಿರುವ ಅಗತ್ಯ ಇರುವ ಯಕ್ಷಗಾನ ಕಲಾವಿದರಿಗೆ ಆಯಾಯ ಪ್ರದೇಶಗಳಲ್ಲಿ ಇರುವ ಘಟಕಗಳ ಮೂಲಕ ಪಡಿತರ ಮತ್ತು ದಿನಸಿ ಕಿಟ್ ಗಳನ್ನು ವಿತರಿಸಲಾಗಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ.
ಕಲಾವಿದರು ಕೊರೊನಾ ವೈರಸ್ ನಿಂದ ತೊಂದರೆಗೊಳಗಾಗಿದ್ದಾರೆ.

ಉದ್ಯೋಗ ಇಲ್ಲದೆ ಮನೆಯಲ್ಲೇ ಉಳಿದು ಸಂಕಷ್ಟಗೊಳಗಾಗಿದ್ದಾರೆ. ವಿಶ್ವಕ್ಕೆ ಮಾರಿಯಾದ ಕೊರೊನಾ ವೈರಸ್ ವಿರುದ್ದ ಎಲ್ಲರೂ ಒಗ್ಗಟ್ಟಾಗಿ ಹೋರಾಡ ಬೇಕಿದೆ.ಸರಕಾರ ಹಾಗೂ ಸಮಾಜ ಒಂದಾಗಿ ಸೇರಿಕೊಂಡು ಮಾರಕ ರೋಗ ಕೊರೊನಾದ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಕಲಾವಿದರು ಕೂಡಾ ಹೆಚ್ಚು ಜಾಗೃತರಾಗ ಬೇಕಾಗಿದೆ. ಸರಕಾರ ತಿಳಿಸಿದಂತೆ ಮನೆಯಲ್ಲೇ ಇದ್ದು ಕಠಿಣ ಪರಿಸ್ಥಿತಿಯನ್ನು ಎದುರಿಸ ಬೇಕಾಗಿದೆ ಎಂದು ಪಟ್ಲ ತಿಳಿಸಿದ್ದಾರೆ.


ಕೊರೊನಾ ರೋಗವನ್ನು ತೊಡೆದು ಹಾಕಲು ಸರಕಾರವು ಬಹಳ ಹರಸಾಹಸ ಪಡುತ್ತಿದೆ. ಸರಕಾರದೊಂದಿಗೆ ನಾವೂ ಕೂಡಾ ಕೈ ಜೋಡಿಸೋಣ. ಪಟ್ಲ ಫೌಂಡೇಶನ್ ಟ್ರಸ್ಟ್ ಗೆ ಸಹಾಯ ಕೇಳಿ ಬಂದ ಮನವಿಗಳನ್ನು ಪುರಸ್ಕರಿಸಿ ಈಗಾಗಲೇ ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಒಂದು ಸಾವಿರ ಮಂದಿ ಕಲಾವಿದರಿಗೆ ಆಹಾರ ಸಾಮಾಗ್ರಿಯ ಕಿಟ್ ಗಳನ್ನು ವಿತರಿಸಲಾಗಿದೆ ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಕಿಟ್ ವಿತರಿಸಿ ಮಾತನಾಡಿದರು. ಟ್ರಸ್ಟ್ ನ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಉಪಾಧ್ಯಕ್ಷ ಮನು ರಾವ್, ಪ್ರ. ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಜತೆ ಕಾರ್ಯದರ್ಶಿ ರಾಜೀವ ಪೂಜಾರಿ ಕೈಕಂಬ, ಉದಯಕುಮಾರ್ ಶೆಟ್ಟಿ ಕೆರೆಕಟ್ಟೆ , ಸಂಘಟನಾ ಕಾರ್ಯದರ್ಶಿ ನವನೀತ ಶೆಟ್ಟಿ ಕದ್ರಿ, ರವಿಚಂದ್ರ ಶೆಟ್ಟಿ ಅಶೋಕ ನಗರ, ಅಶ್ವಿತ್ ಶೆಟ್ಟಿ, ಸತೀಶ್ ಶೆಟ್ಟಿ ಎಕ್ಕಾರ್, ಜಗದೀಶ ಶೆಟ್ಟಿ ಕಾರ್ ಸ್ಟ್ರೀಟ್ ಹಾಗೂ ಎಲ್ಲ ಘಟಕಗಳ ಪದಾಧಿಕಾರಿಗಳು, ಕಲಾವಿದರಿಗೆ ಆಹಾರ ಕಿಟ್ ವಿತರಿಸುವಲ್ಲಿ ನೆರವಾದರು.

Leave a Reply

Your email address will not be published. Required fields are marked *

error: Content is protected !!