ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಸವಿತ ಸಮಾಜದ 2000 ಮಂದಿಗೆ ಆಹಾರ ಕಿಟ್ ವಿತರಣೆ

ಉಡುಪಿ: ಸಂಕಷ್ಟದಲ್ಲಿರುವ ಉಡುಪಿ ಜಿಲ್ಲೆಯ ಸವಿತ ಸಮಾಜದ 2000 ಮಂದಿಗೆ, ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ , ಜಿಲ್ಲಾಡಳಿತ ಮೂಲಕ ಉಚಿತ ಆಹಾರದ ಕಿಟ್ ಗಳನ್ನು, ಉಡುಪಿ ತಾಲೂಕು ಕಛೇರಿಯಲ್ಲಿ ಭಾನುವಾರ ವಿತರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿಸ ಶಾಸಕ ರಘುಪತಿ ಭಟ್ ಮಾತನಾಡಿ, ಜಿಲ್ಲೆಯ ಜನತೆ ಲಾಕ್ ಡೌನ್ ಅವಧಿಯಲ್ಲಿ ಕಾನೂನುಗಳನ್ನು ಯಶಸ್ವಿಯಾಗಿ ಪಾಲನೆ ಮಾಡಿದ್ದರಿಂದ ಉಡುಪಿ ಜಿಲ್ಲೆ ಇಂದು ಹಸಿರು ವಲಯದಲ್ಲಿದೆ, ಜಿಲ್ಲೆಯಲ್ಲಿದ್ದ ಸುಮಾರು 20000 ಕ್ಕೂ ಅಧಿಕ ಕಾರ್ಮಿಕರಿಗೆ, ನಿರಾಶ್ರಿತರಿಗೆ ದಾನಿಗಳ ನೆರವಿನಿಂದ ಪ್ರತಿದಿನ ಆಹಾರ ವಿತರಿಸಲಾಗಿದೆ.

ಜಿಲ್ಲೆಯಲ್ಲಿದ್ದ ಯಾವೊಬ್ಬ ಕಾರ್ಮಿಕರೂ ಹಸಿವೆಯಿಂದ ಬಳಲುವುದಕ್ಕೆ ಬಿಟ್ಟಿಲ್ಲ , ಸಂಕಷ್ಟದಲ್ಲಿದ್ದ ಕಾರ್ಮಿಕರು, ರಿಕ್ಷಾ ಚಾಲಕರು, ಮೀನುಗಾರರ ಮಹಿಳೆಯರಿಗೆ ಉಚಿತ ಆಹಾರದ ಕಿಟ್ ವಿತರಿಸುವಲ್ಲಿ, ಜಿಲ್ಲೆಯ ದಾನಿಗಳ ಕೊಡುಗೆ ಅಮೂಲ್ಯ ಎಂದು
ಹೇಳಿದರು. ಆಹಾರದ ಕಿಟ್ ವಿತರಿಸಿ ಮಾತನಾಡಿದ ಡಾ. ಜಿ.ಶಂಕರ್, ಕೊರೋನಾ ಆರಂಭವಾದ ಕೂಡಲೇ ಜಿಲ್ಲಾಡಳಿತ ಮನವಿ ಮೇರೆಗೆ ಅಗತ್ಯವಿರುವ ಮಾಸ್ಕ್ ಮತ್ತು ಪಿಪಿಟಿ ಕಿಟ್ ಸೇರಿದಂತೆ ಆರೋಗ್ಯ ಇಲಾಖೆಗೆ ಅಗತ್ಯವಿದ್ದ ಸಾಮಗ್ರಿಗಳನ್ನು ತಮ್ಮ
ಟ್ರಸ್ಟ್ ವತಿಯಿಂದ ನೀಡಿದ್ದು, ಇದುವರೆಗೆ 1.5 ಲಕ್ಷ ಮಾಸ್ಕ್ ಗಳು ನೀಡಿದ್ದು, 25000 ಕ್ಕೂ ಅಧಿಕ ಆಹಾರದ ಕಿಟ್ ಗಳನ್ನು 1,25,000 ಕ್ಕೂ ಅಧಿಕ ಫಲಾನುಭವಿಗಳಿಗೆ ಜಿಲ್ಲಾಡಳಿತದ ಮೂಲಕ ವಿತರಿಸಲಾಗಿದೆ, ಪ್ರಸ್ತುತ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್ ನಲ್ಲಿರುವ ಅತ್ಯಂತ ಕಡು ಬಡವರನ್ನು ಗುರುತಿಸಿ ಆಹಾರದ ಕಿಟ್ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಸಂಕಷ್ಟದ ಸಮಯದಲ್ಲಿ ಸಮಾಜಕ್ಕೆ ಅಗತ್ಯ ನೆರವು ನೀಡಲು ತಮ್ಮ ಟ್ರಸ್ಟ್ ಯಾವಾಗಲೂ ಸಿದ್ದವಿದೆ , ಕೊರೋನಾ ವಿರುದ್ದದ ಹೋರಾಟದಲ್ಲಿ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದರು. ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಜಿಲ್ಲೆಯ ದಾನಿಗಳು ನೀಡಿದ ನೆರವಿನಿಂದ , ಜಿಲ್ಲೆಯಲ್ಲಿನ ನಿರಾಶ್ರಿತರಿಗೆ ಮತ್ತು ಸಂಕಷ್ಟ ದಲ್ಲಿದ್ದವರಿಗೆ ಅಗತ್ಯವಿದ್ದ ಸೌಲಭ್ಯ ಒದಗಿಸಲು ಸಾದ್ಯವಾಗಿದೆ , ದಾನಿಗಳು ಉದಾರವಾಗಿ ನೆರವು ನೀಡಿದ್ದರಿಂದ ಜಿಲ್ಲಾಡಳಿತದ ಹಣ ಬಳಸುವ ಅಗತ್ಯವೇ ಕಂಡು ಬಂದಿಲ್ಲ ಎಂದು ತಿಳಿಸಿದರು. ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಸ್ವಾಗತಿಸಿ, ವಂದಿಸಿದರು. ಸವಿತ ಸಮಾಜದ ಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!