ತವರಿನಲ್ಲಿ ಕೊರೋನಾ ಮಾಯವಾಯಿತೇ? ಸತತ 2ನೇ ದಿನವೂ ಹೊಸ ಸೋಂಕಿಲ್ಲ!

ಬೀಜಿಂಗ್: ವಿಶ್ವದಲ್ಲೇ ಮೊದಲ ಬಾರಿಗೆ ಕೊರೋನಾ ವೈರಸ್ ಕಾಣಿಸಿಕೊಂಡ ಚೀನಾದಲ್ಲಿ ಸತತ 2ನೇ ದಿನವೂ ದೇಶೀಯವಾಗಿ ಸೋಂಕು ಖಚಿತಪಟ್ಟ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. 

ಇದೇ ಸ್ಥಿತಿ ಮುಂದಿನ 14 ದಿನ ಮುಂದುವರೆದಿದ್ದೇ ಆದರೆ, ಚೀನಾ ಕೊರೋನಾದಿಂದ ಮುಕ್ತವಾಗಲಿದೆ ಎಂದು ಹೇಳಲಾಗುತ್ತಿದೆ. 

ಈ ನಡುವೆ ಕೊರೋನಾಗೆ ಹೊಸದಾಗಿ ಮೂರು ಮಂದಿ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 3,248ಕ್ಕೆ ಏರಿಕೆಯಾಗಿದೆ. ವಿದೇಶದಿಂದ ಆಗಮಿಸಿದ್ದ 39 ಮಂದಿಗೆ ಸೋಂಕು ದೃಢವಾಗಿದ್ದು, ಆ ಮೂಲಕ 228 ವಿದೇಶಿಯರಿಗೆ ಸೋಂಕು ಬಾಧಿಸಿದಂತಾಗಿದೆ. 

ವ್ಯಾಪಕವಾಗಿ ಹರಡಿ ಸಾವಿರಾರು ಜೀವಗಳನ್ನು ಬಲಿ ಪಡೆಯುತ್ತಿದ್ದ ಕೊರೋನಾ ವೈರಸ್ ನಿಯಂತ್ರಣಕ್ಕೆ ಪಣತೊಟ್ಟ ಚೀನಾ ಕ್ರಮವನ್ನು ಇದೀಗ ಸೋಷಿಯನ್ ನ್ಯೂಕ್ಲಿಯರ್ ವೆಪನ್ ಎಂದೇ ಬಣ್ಣಿಸಲಾಗುತ್ತಿದೆ. ವೈರಸ್ ವ್ಯಾಪಕವಾಗುತ್ತಿದ್ದಂತೆಯೇ ಅಲ್ಲಿನ ಸರ್ಕಾರ ಕುರ್ತು ಕ್ರಮ ಕೈಗೊಂಡಿತ್ತು. ಅದರಲ್ಲೂ ಮುಖ್ಯವಾಗಿ ಇಡೀ ಚೀನಾ ಒಗ್ಗಟ್ಟಿನಿಂದ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದೇ ವೈರಸ್ ನಿಯಂತ್ರಣಕ್ಕೆ ಬರಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. 

ಕೊರೋನಾ ವೈರಸ್ ಸಾರ್ಸ್’ನ ಇನ್ನೊಂದು ರೂಪ ಎನ್ನುವುದು ಖಚಿತವಾಗುತ್ತಿದ್ದಂತೆಯೇ ಮತ್ತು ಸೋಂಕಿತರ ಪ್ರಮಾಣ ದಿನಂದಿಂದ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಹೆಚ್ಚುತ್ತಿದ್ದಂತೆಯೇ ಚೀನಾ ಕೊರೋನಾ ಚಿಕಿತ್ಸೆಗಾಗಿಯೇ ಬರೀ 10 ದಿನದಲ್ಲಿ ವುಹಾನ್ ನಲ್ಲಿ 1000 ಹಾಸಿಗೆ ಸಾಮರ್ಥ್ಯದ 25,000 ಚ.ಮೀ ವಿಸ್ತೀರ್ಣದ ಆಸ್ಪತ್ರೆಯನ್ನೇ ನಿರ್ಮಿಸಿತ್ತು. 

ಬರೀ 10 ದಿನಗಳಲ್ಲಿ ಆಸ್ಪತ್ರೆ ನಿರ್ಮಾಣ ಎಂದರೆ ಅದು ಸುಲಭದ ಮಾತಲ್ಲ. 7000ಕ್ಕೂ ಹೆಚ್ಚು ಕಾರ್ಮಿಕರು ದಿನದ ಮೂರು ಪಾಳಿಯಲ್ಲಿ ಕೆಲಸ ಮಾಡಿ ಆಸ್ಪತ್ರೆ ನಿರ್ಮಿಸಿದ್ದರು. ಅದರ ಜೊತಗೆ ಉದ್ಘಾಟನೆಯಾದ ಬಳಿಕವೇ ಇಲ್ಲಿಗೆ 1400ಕ್ಕೂ ಹೆಚ್ಚು ವೈದ್ಯರು, ದಾದಿಯರು ಮತ್ತು ಇತರೆ ಸಿಬ್ಬಂದಿಗಳನ್ನು ನಿಯೋಜಿಸಿತ್ತು. ಜೊತೆಗೆ ಎಲ್ಲಾ ರೀತಿಯ ಅತ್ಯಾಧುನಿಕ ಸೌಲಭ್ಯಗಲನ್ನು ಒದಗಿಸಿತ್ತು. 

ಇನ್ನು ಕೊರೋನಾ ವೈರಸ್ ನಿಯಂತ್ರಣಕ್ಕೆ ಚೀನಾ ಕೈಗೊಂಡ ತುರ್ತು ಕ್ರಮವನ್ನು ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿತ್ತು. ಆದರೆ, ವೈರಸ್ ಆರಂಭಿಕ ಹಂತದಲ್ಲಿದ್ದಾಗ ಚೀನಾದ ನಿರ್ಲಕ್ಷ್ಯ, ಕೆಟ್ಟ ನಿರ್ವಹಣೆಯೇ ಇಷ್ಟೊಂದು ಸಂಖ್ಯೆಯಲ್ಲಿ ಜನರು ಬಲಿಯಾಗಲು ಕಾರಣ ಎಂದು ಹೇಳಲಾಗುತ್ತಿದೆ. 

ಏಕೆಂದರೆ, ಕಳೆದ ವರ್ಷ ಡಿಸೆಂಬರ್ 8ರಂದೇ ಚೀನಾದ ವುಹಾನ್ ನಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಆದರೆ, ಕೊರೋನಾ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದು ಮಾತ್ರ ಜನವರಿ 14 ರಿಂದ. ಚೀನಾ ಎಡವಿದ್ದೇ ಇಲ್ಲಿ. ವುಹಾನ್ ನ ನೇತ್ರ ತಜ್ಞ ಡಾ.ಲೀವೆನ್ ಲಿಯಂಗ್ ಎಂಬುವವರು ಇದು ಸಾರ್ಸ್ ರೀತಿಯ ವೈರಸ್ ಎಂದು ಎಚ್ಚರಿಸಿದ್ದರೂ, ವದಂತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಚೀನಾ ಸರ್ಕಾರ ಆದೇಶಿಸಿತ್ತು. 

ಜನವರಯಿಲ್ಲಿ ಹೊಸ ವೈರಸ್ ಸಾರ್ಸ್ ರೂಪದ್ದು ಎಂದಿದ್ದ 8 ಜನರನ್ನು ಬಂಧನಕ್ಕೊಳಪಡಿಸಿತ್ತು. ಆದರೆ, ತಜ್ಞರು ಅನಂತರ ಕೊರೋನಾ ಅಥವಾ ಕೋವಿಡ್-19, ಸಾರ್ಸ್ ನ ಇನ್ನೊಂದು ರೂಪ ಎನ್ನುವುದನ್ನು ಸಾಬೀತುಪಡಿಸಿದರು. 

Leave a Reply

Your email address will not be published. Required fields are marked *

error: Content is protected !!