ಯಕ್ಷಗಾನ ಕಲಾವಿದನ ಮೈಮೇಲೆ ಬಂದ ಧೂಮಾವತಿ!
ಉಡುಪಿ: ಕರಾವಳಿಯಲ್ಲಿ ದೈವಾರಾಧನೆ ನಡೆಯುವಾಗ ಅಲ್ಲಿದ್ದ ಭಕ್ತರಲ್ಲಿ ಕೆಲವರಿಗೆ ದೈವಾವೇಶ ಆಗುವುದು ಸಾಮಾನ್ಯ, ಆದರೇ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ವೇಷಧಾರಿಯೊಬ್ಬರಿಗೆ ದೈವಾವೇಶ ಆದ ಅಪೂರ್ವ ಘಟನೆ ಇಲ್ಲಿನ ಬ್ರಹ್ಮಾವರ ಅಯ್ಯಪ್ಪ ಮಂದಿರದಲ್ಲಿ ನಡೆದಿದೆ.
ಇಲ್ಲಿನ ಅಯ್ಯಪ್ಪ ಭಕ್ತರು ವೃತಾಚರಣೆ ಅಂಗವಾಗಿ ತಮ್ಮ ಮಂದಿರದಲ್ಲಿ ಹಟ್ಟಿಯಂಗಡಿ ಯಕ್ಷಗಾನ ಮೇಳದಿಂದ ದೈವದೃಷ್ಟಿಎಂಬ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಿದ್ದರು. ಈ ಪ್ರಸಂಗದಲ್ಲಿ ಧೂಮಾವತಿ ಎಂಬ ದೈವದ ಪಾತ್ರವೊಂದು ಬರುತ್ತದೆ. ಈ ಧೂಮಾವತಿ ದೈವದ ವೇಷ ಧರಿಸಿದ್ದ ಕಲಾವಿದ ಪ್ರೇಕ್ಷರ ಮಧ್ಯದಿಂದ ವೇದಿಕೆಗೆ ಬರುವುದಕ್ಕೆ ಸಿದ್ಧರಾಗುತ್ತಿದ್ದಂತೆ ಅವರ ಮೈಮೇಲೆ ಸ್ವತಃ ದೈವವೇ ಆವೇಶವಾಗಿ ಬಿಟ್ಟಿದೆ. ಇದರಿಂದ ಕೆಲಕಾಲ ಪ್ರೇಕ್ಷಕರು ಗಾಬರಿಯಾದರು.
ಜನರ ಮಧ್ಯೆ ಆವೇಶದಿಂದ ನಡುಗುತ್ತಾ ಹೂಂಕರಿಸುತ್ತಾ ಬಂದ ಕಲಾವಿದನನ್ನು ಭಕ್ತರು ಗಟ್ಟಿಯಾಗಿ ಹಿಡಿದುಕೊಂಡರು. ನಂತರ ಅಯ್ಯಪ್ಪ ಭಕ್ತವೃಂದದ ಗುರುಸ್ವಾಮಿ ಅವರು ಬಂದು ವೇಷಧಾರಿಗೆ ದೇವರ ಪ್ರಸಾದವನ್ನು ನೀಡಿದರು, ಬಳಿಕ ದೈವಾವೇಶಭರಿತ ಇಳಿದು ಕಲಾವಿದರು ಶಾಂತರಾದರು. ನಂತರ ಯಕ್ಷಗಾನ ಮುಂದುವರಿಯಿತು.
ಈ ಘಟನೆಯನ್ನು ಕೆಲವರು ಮೊಬೈಲಿನಲ್ಲಿ ಚಿತ್ರೀಕರಿಸಿದ್ದು, ಅದೀಗ ಸಾಮಾಜಿಕ ಜಾಲತಾಣ ಭಾರೀ ಪ್ರಚಾರ ಪಡೆಯುತ್ತಿದೆ.