ಪರ್ಯಾಯ: ಮೇಳೈಸಿದ ಸಾಂಸ್ಕೃತಿಕ ವೈಭವ, ಕಣ್ತುಂಬಿಕೊಂಡ ಭಕ್ತರು

ಉಡುಪಿ: ಅದಮಾರು ಮಠದ ಪರ್ಯಾಯ ಮಹೋತ್ಸವದ ಅಂಗವಾಗಿ ಶನಿವಾರ ನಸುಕಿನಲ್ಲಿ ವೈಭವದ ಮೆರವಣಿಗೆಯೊಂದಿಗೆ ಸಾಂಸ್ಕೃತಿಕ ವೈಭವ ನಡೆಯಿತು. ಕಾಪು ದಂಡಯಾತ್ರೆ ಮಧ್ಯರಾತ್ರಿ 1.30 ಕ್ಕೆ ಸ್ನಾನ ಮುಗಿಸಿದ ಅದಮಾರು ಯತಿಗಳು, 1.40 ಕ್ಕೆ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ 2 ಗಂಟೆಗೆ ಜೋಡುಕಟ್ಟೆ ಆಗಮಿಸಿದರು.

2.15 ರ ಸುಮಾರಿಗೆ ವೈಭವದ ಮೆರವಣಿಗೆ ಆರಂಭವಾಯಿತು. ಅಲ್ಲಿಂದ ಹೊರಟ ಮೆರವಣಿಗೆ ಕೋರ್ಟ್ ರಸ್ತೆ, ಡಯನಾ ಸರ್ಕಲ್,ಹಳೆ ಅಂಚೆ ಕಚೇರಿ ರಸ್ತೆ ,ಐಡಿಯಲ್ ಸರ್ಕಲ್, ತೆಂಕಪೇಟೆ ಮಾರ್ಗವಾಗಿ ರಥಬೀದಿಗೆ ಸಾಗಿ ಬಂತು. ಮೆರವಣಿಗೆಯಲ್ಲಿ ಸಾಗಿದ ಜನಪದ ಕಲಾ ಪ್ರಕಾರಗಳು ಕಣ್ಮನ ಸೆಳೆದವು. ಸ್ತಬ್ಧಚಿತ್ರಗಳು, ಚೆಂಡೆಯ ನಾದ ಮೆರವಣಿಗೆಯ ಅಂದ ಹೆಚ್ಚಿಸಿದವು. ಜಗ್ಗಲಿಕೆ ವಾದ್ಯ, ಶ್ರೀಸಾಯಿ ಚೆಂಡೆ ಬಳಗ, ಪೂಜೆ ಕುಣಿತ, ಗೊರವರ ಕುಣಿತ, ಕೊಂಬು ಕಹಳೆ, ತುಳಸಿ ಕಟ್ಟೆ, ಮೂರು ಪುಟಾಣಿಗಳಿಂದ ಮರಕಾಲು ಕುಣಿತ, ಕಂಗೀಲು‌ ನೃತ್ಯ, ನಾಸಿಕ್ ಬ್ಯಾಂಡ್, ಗೊಂಬೆಯಾಟ, ಕೊಂಬೆ ಬಳಗ, ಹರೇ ರಾಮ ಹರೇ ಕೃಷ್ಣ, ಪೂರ್ಣಕುಂಭ, ಮಹಿಳೆಯರಿಂದ ಭಜನೆ, ಕ್ಲೀನ್ ಉಡುಪಿ ಗ್ರೀನ್ ಉಡುಪಿ, ಮಾರ್ಪಳ್ಳಿ ಮಹಿಳಾ ಮಂಡಳಿಯಿಂದ ನವಶಕ್ತಿ ವೈಭವ ‌ನೋಡುಗರ ಗಮನ ಸೆಳೆಯಿತು .

ಪಂಚವಾದ್ಯ, ವೇದ ಘೋಷ ಮೊಳಗಿತು. ಪೇಜಾವರ ಮಠದ ಕೀರ್ತಿಶೇಷ ಶ್ರೀವಿಶ್ವೇಶತೀರ್ಥ ಶ್ರೀಪಾದರು ಶ್ರೀ ರಾಮನಿಗೆ ಪೂಜೆ ಸಲ್ಲಿಸುತ್ತಿರುವ ಶ್ರೀ ರಾಮಮಂದಿರದ ಟ್ಯಾಬ್ಲೋ ಕಣ್ತುಂಬಿಕೊಂಡರು. ಕರಾವಳಿಯ ಕಲೆ, ಸಂಸ್ಕತಿ ಬಿಂಬಿಸುವ ಟ್ಯಾಬ್ಲೊಗಳು ಗಮನ ಸೆಳೆದವು. ಕರಾವಳಿಯ ಚೆಂಡೆ ನಾದಕ್ಕೆ ನೆರೆದಿದ್ದವರು ಮನಸೋತರು. ಡೊಳ್ಳು ಕುಣಿತ, ಪೂಜಾ ಕುಣಿತ, ಕೋಲಾಟ, ನಗಾರಿ ಸೇರಿದಂತೆ 15ಕ್ಕೂ ಹೆಚ್ಚು ಜಾನಪದ ಕಲಾ ಪ್ರಕಾರಗಳು ಆಕರ್ಷಿಸಿದವು.

ಕರಾವಳಿಯ ಮೀನುಗಾರಿಕೆ, ಮಧ್ವಾಚಾರ್ಯರ ಮೂಲಸ್ಥಾನ ಕುಂಜಾರುಗಿರಿ, ಯಕ್ಷಗಾನ, ತುಳುನಾಡು ಸೃಷ್ಟಿಕರ್ತ ಪರಶುರಾಮನ ಟ್ಯಾಬ್ಲೋಗಳು ಆಕರ್ಷಕವಾಗಿದ್ದವು. ನಸುಕಿನ ವೇಳೆಯಲ್ಲೂ ಸಾವಿರಾರು ಮಂದಿ ಭಕ್ತರು ರಸ್ತೆ ಬದಿ ನಿಂತು ಪರ್ಯಾಯ ಮೆರವಣಿಗೆ ವೀಕ್ಷಿಸಿದರು.


ಅದಮಾರು ಶ್ರೀಈಶಪ್ರಿಯ ತೀರ್ಥ ಶ್ರೀಪಾದರನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಹೊತ್ತುಕೊಂಡು ಬರಲಾಯಿತು. ಕೃಷ್ಣಾಪುರ, ಪೇಜಾವರ ಕಾಣಿಯೂರು, ಸೋದೆ ಶ್ರೀಗಳು ಪಲ್ಲಕ್ಕಿಯಲ್ಲಿ ಕುಳಿತುಕೊಂಡಿದ್ದು, ಪಲ್ಲಕ್ಕಿಯನ್ನು ಟ್ಯಾಬ್ಲೋನಲ್ಲಿ ಇರಿಸಲಾಯಿತು.
50 ಕ್ಕೂ ಅಧಿಕ ಟ್ಯಾಬ್ಲೋ ನೋಡುಗರ ಮನಸೂರೆಗೊಳಿಸಿತು. ಕಲ್ಪನಾ ಚಿತ್ರ ಮಂದಿರದ ಸರ್ಕಲ್‌ನಲ್ಲಿ ಭಕ್ತರಿಗೆ ಕುಳಿತುಕೊಳ್ಳಲು ಗ್ಯಾಲರಿ ವ್ಯವಸ್ಥೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!