7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ

ಬೆಂಗಳೂರು: ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ 7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ.

‘ಹಲವು ಸಮೀಕ್ಷೆಗಳು ಮಕ್ಕಳ ಕಲಿಕಾ ಮಟ್ಟ ಕುಸಿಯುತ್ತಿರುವುದನ್ನು ತಿಳಿಸಿರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ. ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಶ್ನೆಪತ್ರಿಕೆ ತಯಾರಿಸಲಿದ್ದು, ಜಿಲ್ಲಾ ಮಟ್ಟದಲ್ಲಿ ಮೌಲ್ಯಮಾಪನ ನಡೆಯಲಿದೆ. ಪೂರಕ ಪರೀಕ್ಷೆಗೂ ವ್ಯವಸ್ಥೆ ಮಾಡಲಾಗುತ್ತದೆ. ಪೋಷಕರು, ಶಿಕ್ಷಕರು ಹಾಗೂ ಹಲವು ಸಂಘಟನೆಗಳಿಂದ ಒತ್ತಾಯ ಕೇಳಿಬಂದಿದ್ದರಿಂದ ಪಬ್ಲಿಕ್‌ ಪರೀಕ್ಷೆ ನಡೆಸುವ ತೀರ್ಮಾನಕ್ಕೆ ಬರಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್ ತಿಳಿಸಿದರು.

‘ಶಾಲೆ ಆರಂಭವಾಗಿ 4 ತಿಂಗಳಾಯಿತು. ಈ ಹಂತದಲ್ಲಿ ಪರೀಕ್ಷೆಯ ಸೂಚನೆ ನೀಡಿದರೆ ಮಕ್ಕಳಿಗೆ ಗೊಂದಲ ಆಗಬಹುದು. ಈ ಬಾರಿ ಪರೀಕ್ಷೆ ಬೇಡವೇ ಬೇಡ’ ಎಂಬ ಅಭಿಪ್ರಾಯ ವ್ಯಾಪಕವಾಗಿ ಕೇಳಿಬಂದರೆ ಮಾತ್ರ ಪಾಸು–ಫೇಲು ವ್ಯವಸ್ಥೆಯನ್ನು ಈ ವರ್ಷದ ಬದಲಿಗೆ ಮುಂದಿನ ವರ್ಷ ಜಾರಿಗೆ ತರಲಾಗುವುದು. ಪಬ್ಲಿಕ್ ಪರೀಕ್ಷೆ ಮಾಡುವುದು ಖಚಿತ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘ಎಸ್ಸೆಸ್ಸೆಲ್ಸಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಅಷ್ಟಾಗಿ ನಡೆದಿಲ್ಲ. 7ನೇ ತರಗತಿಯಲ್ಲಿ ಸಹ ಸೋರಿಕೆ ಆಗದಂತೆ ಕ್ರಮ ಜರುಗಿಸಲಾಗುವುದು. ಮೌಲ್ಯಮಾಪನ, ಪೂರಕ ಪರೀಕ್ಷೆಯ ಬಗ್ಗೆಯೂ ಗಮನ ಹರಿಸಲಾಗಿದೆ. 7ನೇ ತರಗತಿಯಲ್ಲಿ ಫೇಲಾದರೆ ಮಕ್ಕಳು ಶಾಲೆಯಿಂದ ಹೊರಗುಳಿಯುವ ಸಾಧ್ಯತೆಗಳ ಬಗ್ಗೆಯೂ ಚಿಂತನೆ ನಡೆಸಲಾಗಿದೆ’ ಎಂದು ಸಚಿವರು ವಿವರಿಸಿದರು.

ಪರೀಕ್ಷೆ ನಡೆಸುವುದಕ್ಕೆ ತಜ್ಞರ ಸಮಿತಿ ರಚಿಸಲಾಗುತ್ತದೆ. ಅದಕ್ಕಿಂತ ಮೊದಲಾಗಿ ಸರ್ಕಾರದ ನೀತಿ ಪ್ರಕಟವಾಗಬೇಕಾಗುತ್ತದೆ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್‌.ಉಮಾಶಂಕರ್‌ ಹೇಳಿದರು.

* ನೂತನ ಶಿಕ್ಷಣ ನೀತಿಯಲ್ಲಿ ಸಹ 5 ಮತ್ತು 8ನೇ ತರಗತಿಗಳಲ್ಲಿ 10ನೇ ತರಗತಿಗೆ ಪೂರಕವಾಗಿ ಪರೀಕ್ಷೆ ನಡೆಸಬೇಕು ಎಂದು ತಿಳಿಸಲಾಗಿದೆ

1 thought on “7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ

  1. Please coduct the public exam for 7th standard students from this year itself. It Will be very useful to us.
    I’m very happy from this.

Leave a Reply

Your email address will not be published. Required fields are marked *

error: Content is protected !!