ದಲಿತರ ಶವ ಸಂಸ್ಕಾರಕ್ಕೆ ನಿರಾಕರಣೆ: ಪಂಚಾಯತ್ ಎದುರು ಸುಡಲು ಯತ್ನ
ಉಡುಪಿ: ಸಾರ್ವಜನಿಕ ಹಿಂದೂ ರುದ್ರಭೂಮಿ ಇದ್ದರೂ ದಲಿತರ ಶವ ಸಂಸ್ಕಾರಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಮಂಗಳವಾರ ದಲಿತರು ಕಾಪುವಿನ ಉಚ್ಚಿಲ ಬಡಾ ಗ್ರಾಮ ಪಂಚಾಯಿತಿ ಕಚೇರಿ ಎದುರು ಶವಸಂಸ್ಕಾರಕ್ಕೆ ಯತ್ನಿಸಿದರು.
ಇಲ್ಲಿನ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಂಕರ್ (70) ಮಂಗಳವಾರ ನಿಧನ ಹೊಂದಿದ್ದರು. ಅವರ ಅಂತ್ಯಕ್ರಿಯೆಗೆ ಹಿಂದೂ ರುದ್ರಭೂಮಿಯಲ್ಲಿ ಅವಕಾಶ ಸಿಗದಿದ್ದಕ್ಕೆ ಆಕ್ರೋಶಗೊಂಡ ದಲಿತ ಮುಖಂಡರು ಶವವನ್ನು ಪಂಚಾಯಿತಿ ಕಚೇರಿ ಎದುರಿಗಿಟ್ಟು ಪ್ರತಿಭಟನೆ ನಡೆಸಿದರು.
ಶಾಸಕ ಲಾಲಾಜಿ ಆರ್.ಮೆಂಡನ್ ವಿರುದ್ಧ ಘೋಷಣೆ ಕೂಗಿ ‘ನಾವೆಲ್ಲರೂ ಒಂದು ನಾವೆಲ್ಲರೂ ಹಿಂದೂ’ ಎನ್ನುವ ಸಂಘ ಪರಿವಾರದ ಮುಖಂಡರು ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ರುದ್ರಭೂಮಿ ಬಳಸಲು ಬಿಡದಿದ್ದರೆ ಕಚೇರಿ ಎದುರೇ ಅಂತ್ಯ ಸಂಸ್ಕಾರ ಮಾಡುವುದಾಗಿ ಬೆದರಿಕೆ ಹಾಕಿದರು.
ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದರು. ಅಷ್ಟರಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕಾಪು ತಹಶೀಲ್ದಾರ್ ಮಹಮ್ಮದ್ ಐಸಾಕ್ ಹಾಗೂ ಪೊಲೀಸರು ಮಧ್ಯೆ ಪ್ರವೇಶಿಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು.
ಉಚ್ಚಿಲ ಬಡಾ ಗ್ರಾಮದಲ್ಲಿರುವ ಹಳೆಯ ರುದ್ರಭೂಮಿಯನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕ ರುದ್ರಭೂಮಿಯಾಗಿ ಬಳಸಲು ನಿರ್ಧರಿಸಲಾಗಿದೆ. ಈಗಾಗಲೇ ಶೇ 85ರಷ್ಟು ಕಾಮಗಾರಿ ಮುಗಿದಿದೆ. ಆದರೆ ಒಂದು ವರ್ಗ ಸ್ಮಶಾನವನ್ನು ಬೇರೆ ವರ್ಗದವರು ಬಳಸುವುದಕ್ಕೆ ವಿರೋಧ ವ್ಯಕ್ತಪಡಿಸಿ ನ್ಯಾಯಾಲಯದ ಮೆಟ್ಟಿಲೇರಿದೆ. ಶೀಘ್ರವೇ ತಡೆಯಾಜ್ಞೆ ತೆರವಿಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಲಿದೆ ಎಂದು ಎಡಿಸಿ ಭರವಸೆ ನೀಡಿದರು.
ಬಳಿಕ 4 ತಾಸುಗಳ ಪ್ರತಿಭಟನೆ ಕೊನೆಗೊಳಿಸಿ, ಕಚೇರಿ ಎದುರು ಅಂತಿಮ ನಮನ ಸಲ್ಲಿಸಿ, ಮೃತರ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮೃತ ದಲಿತ ಮುಖಂಡ ಶಂಕರ್ ಹಾಗೂ ಅವರ ಪುತ್ರ ದಿನಕರ್ ಹಿಂದೂ ರುದ್ರಭೂಮಿಯನ್ನು ಎಲ್ಲ ವರ್ಗದವರು ಬಳಸಲು ಅವಕಾಶ ನೀಡಬೇಕು ಎಂದು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು