ಡೆಂಗ್ಯೂ ಮಾಸಾಚರಣೆ – ಮಾಹಿತಿ ಕಾರ್ಯಕ್ರಮ – ಸಮವಸ್ತ್ರ, ಬ್ಯಾಗ್ ವಿತರಣೆ

ಉಡುಪಿ: ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಮತ್ತು ಬಾಲವಿಕಾಸ ಸಮನ್ವಯ ಸಮಿತಿ ಅಂಗನವಾಡಿ ಕೇಂದ್ರ ಬಂಟಕಲ್ಲು ಇವರ ಜಂಟಿ ಆಶ್ರಯದಲ್ಲಿ ಡೆಂಗ್ಯೂ ಮಾಸಾಚರಣೆ ಕಾರ್ಯಕ್ರಮ ಬಂಟಕಲ್ಲು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಗ್ರಾಪಂ ಸದಸ್ಯ ಕೆ.ಆರ್. ಪಾಟ್ಕರ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ ಸಂತೋಷ್ ಕುಮಾರ್ ಬೈಲೂರುರವರು ಡೆಂಗ್ಯೂ ಮಾಸಾಚರಣೆ ಮಾಹಿತಿ ನೀಡಿದರು. ಮಾತ್ರವಲ್ಲದೆ ಈ ರೋಗಕ್ಕೆ ಕಾರಣವಾಗುವಂತಹ ಅಂಶಗಳು, ರೋಗದ ಲಕ್ಷಣಗಳು ಹಾಗೂ ನಿಯಂತ್ರಣ ಮತ್ತು ಅಗತ್ಯದ ಚಿಕಿತ್ಸೆಯ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು.

ವೈಯಕ್ತಿಕ ಸ್ವಚ್ಛತೆ, ಸಾಮಾಜಿಕ ಸ್ವಚ್ಛತೆ, ಪರಿಸರ ಸ್ವಚ್ಛತೆ ಕಾಪಾಡುವುದರ ಮೂಲಕ ಡೆಂಗ್ಯೂ ಬರದಂತೆ ತಡೆಯಲು ಬೇಕಾದ ಮಾರ್ಗದರ್ಶನ ಜೊತೆಗೆ ಡೆಂಗ್ಯೂ, ಮಲೇರಿಯಾ ಸಹಿತ ಇತರ ಕಾಯಿಲೆಗಳು ಬಂದಾಗ ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದೊರಕುವ ಸೌಲಭ್ಯ ಮತ್ತು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಆಯುಷ್ಮಾನ್ ಭಾರತ್ ಯೋಜನೆಯ ಬಗ್ಗೆಯೂ ಮಾಹಿತಿ ನೀಡಿದರು.

ವಳದೂರು ವೆಲ್ಫೆರ್ ಅಸೋಸಿಯೇಶನ್ ಸಂಸ್ಥೆ  ಅಂಗನವಾಡಿ ಮಕ್ಕಳಿಗೆ ನೀಡಿದ ಸ್ಕೂಲ್ ಬ್ಯಾಗ್ ಗಳನ್ನು ಮಜೂರು ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ವಳದೂರು ವಿತರಿಸಿದರು. ಅಂಗನವಾಡಿ ಶಿಕ್ಷಕಿ ವಿನಯ ಹರೀಶ್ ಅವರು ನೀಡಿದ ಸಮವಸ್ತ್ರವನ್ನು ಬಂಟಕಲ್ಲು ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಲಾವಣ್ಯವತಿ ಬಾಯಿಯವರು ವಿತರಿಸಿದರು.

ಈ ಸಂದರ್ಭದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷೆ ಶಾಶ್ವತಿ, ಸ್ತ್ರೀಶಕ್ತಿ ಸಂಘದ ಅಧ್ಯಕ್ಷರುಗಳಾದ ಸರಸ್ವತಿ, ಸಂಗೀತ ಪೂಜಾರ್ತಿ, ಸಹಾಯಕಿ ಸಂಧ್ಯಾ ಆಚಾರ್ಯ , ಆಶಾ ಕಾರ್ಯಕರ್ತರಾದ ಕಮಲ, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ, ಸ್ತ್ರೀಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!