ಹಲ್ಲೆ ಆರೋಪಿಗಳ ಬಂಧನಕ್ಕೆ ಆಗ್ರಹ : ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
ಮಡಿಕೇರಿ : ಹಾಕತ್ತೂರು ಗ್ರಾಮದಲ್ಲಿ ಶುಕ್ರವಾರ ಸಂಜೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಯತೀಶ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ, ವಿವಿಧ ಹಿಂದೂ ಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಹಾಕತ್ತೂರು ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿದರು.
ಹಾಕತ್ತೂರು ಸೊಸೈಟಿ ಮುಂಭಾಗದಿಂದ ಮೆರವಣಿಗೆಯಲ್ಲಿ ಸಾಗಿ ಬಂದ ಕಾರ್ಯಕರ್ತರು ಹಾಕತ್ತೂರು ಜಂಕ್ಷನ್‌ನಲ್ಲಿ ಸಮಾವೇಶಗೊಂಡು ಕೃತ್ಯ ನಡೆಸಿದ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಹಾಕತ್ತೂರು ಗ್ರಾಮದ ನಿವಾಸಿ ಯತೀಶ್ ಮೇಲೆ ದುಷ್ಕರ್ಮಿಗಳಿಬ್ಬರು ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರೂ ಕೂಡ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಹಿಂದುಗಳ ಭಾವನೆಗಳನ್ನು ಕೆಣಕುವ ಮೂಲಕ ಅಶಾಂತಿ ಸೃಷ್ಟಿಸಲು ಹುನ್ನಾರ ನಡೆಸಲಾಗುತ್ತಿದೆ. ಇದರ ಭಾಗವಾಗಿಯೇ ಈ ಕೃತ್ಯಗಳನ್ನು ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಸಂದರ್ಭ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್, ಹಿಂದೂ ಕಾರ್ಯಕರ್ತರ ಮೇಲೆ ಈ ರೀತಿ ನಿರಂತರ ಹಲ್ಲೆ ಯತ್ನಗಳು ನಡೆಯುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ತಕ್ಷಣವೇ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಆಗ್ರಹಿಸಿದರು.
ಈ ನಡುವೆ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಜಿಲ್ಲಾಸ್ಪತ್ರೆಗೆ ತೆರಳಿ ಗಾಯಾಳು ಯತೀಶ್‌ನ ಆರೋಗ್ಯ ವಿಚಾರಿಸಿ, ಘಟನೆ ಕುರಿತು ಮಾಹಿತಿ ಪಡೆದುಕೊಂಡರು. ಬಳಿಕ ಹಾಕತ್ತೂರು ಜಂಕ್ಷನ್‌ಗೆ ಆಗಮಿಸಿದ ಶಾಸಕರು, ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಸೋಮವಾರಪೇಟೆಯ ವಲಯ ಕಾರ್ಯದರ್ಶಿ ಸುನಿಲ್, ಜಿಲ್ಲಾ ಪ್ರಚಾರ ಪ್ರಮುಖ್ ಕುಮಾರ್, ಮಡಿಕೇರಿ ನಗರ ಅಧ್ಯಕ್ಷ ನಂದೀಶ್, ಜಾಗರಣಾ ವೇದಿಕೆ, ಬಜರಂಗದಳ ಸೇರಿದಂತೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಹಾಕತ್ತೂರು ಮತ್ತು ತೊಂಬತ್ತು ಮನೆ, ಮೂರ್ನಾಡು, ಮರಗೋಡು ವ್ಯಾಪ್ತಿಯ ಕಾರ್ಯಕರ್ತರು ಪಾಲ್ಗೊಂಡಿದ್ದರು. ಹಾಕತ್ತೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.