ಪ್ರತಿದಿನ 40 ಸಾವಿರ ಯುನಿಟ್ ರಕ್ತದ ಬೇಡಿಕೆ: ಡಾ.ಉಮೇಶ್
ಉಡುಪಿ: ಭಾರತದಲ್ಲಿ ವರ್ಷಕ್ಕೆ ಸುಮಾರು ಐದು ಕೋಟಿ ಹಾಗೂ ಪ್ರತಿದಿನ 40 ಸಾವಿರ ಯುನಿಟ್ ರಕ್ತದ ಬೇಡಿಕೆಯಿದ್ದು, ಸದ್ಯ ನಮ್ಮಲ್ಲಿ ವರ್ಷಕ್ಕೆ ಮೂರು ಕೋಟಿ ಯುನಿಟ್‌ನಷ್ಟು ಮಾತ್ರ ರಕ್ತ ಸಂಗ್ರಹವಾಗುತ್ತಿದೆ. ಈ ಕೊರತೆ ಯನ್ನು ನೀಗಿಸಲು ಸ್ವಯಂಪ್ರೇರಿತ ರಕ್ತದಾನ ಮಾಡಬೇಕಾಗಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಉಡುಪಿ ಕರಾವಳಿ ಶಾಖೆಯ ಅಧ್ಯಕ್ಷ ಡಾ.ಉಮೇಶ್ ಪ್ರಭು ಹೇಳಿದ್ದಾರೆ.
ಉಡುಪಿ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್ ಮತ್ತು ಮಣಿಪಾಲ ಕೆಎಂಸಿಯ ಬ್ಲಡ್‌ಬ್ಯಾಂಕ್ ಸಹಯೋಗದಲ್ಲಿ ಬುಧವಾರ ಉಡುಪಿ ಜಾಮೀಯ ಮಸೀದಿಯಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭ ದಲ್ಲಿ ಅವರು ಮಾತನಾಡುತಿದ್ದರು.
ಹೆರಿಗೆ, ಅಪಘಾತ ಹಾಗೂ ಮಾರಕ ಕಾಯಿಲೆಗಳ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ರಕ್ತ ಅಗತ್ಯವಾಗಿ ಬೇಕಾಗುತ್ತದೆ. ನಮ್ಮಲ್ಲಿ ಜನರಲ್ಲಿ ಜಾಗೃತಿ ಮೂಡಿದ ಪರಿ ಣಾಮ ಇಂದು ಜನ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುತ್ತಿದ್ದಾರೆ. ಎಲ್ಲ ಕಡೆ ಜಾತಿ, ಧರ್ಮಗಳು ಮುಖ್ಯವಾಗಿದ್ದರೆ, ಬ್ಲಡ್‌ಬ್ಯಾಂಕ್‌ಗಳಲ್ಲಿ ಈ ಜಾತಿ ಧರ್ಮ ಎಂಬುದು ಬರುವುದೇ ಇಲ್ಲ. ಒಬ್ಬರು ರಕ್ತದಾನ ಮಾಡುವುದರಿಂದ ಮೂವರ ಜೀವವನ್ನು ಉಳಿಸಬಹುದಾಗಿದೆ ಎಂದರು.
ಕೆಎಂಸಿ ಬ್ಲಡ್ ಬ್ಯಾಂಕಿನ ಡಾ.ಪ್ರತೀಕಾ ರಕ್ತದಾನದ ಮಹತ್ವ ಕುರಿತು ಮಾಹಿತಿ ನೀಡಿದರು. ಮಣಿಪಾಲ ಮಸೀದಿ ಅಧ್ಯಕ್ಷ ಹಾಜಿ ಕೆ.ಅಬ್ದುಲ್ಲಾ ಪರ್ಕಳ, ಉಡುಪಿ ಜಾಮೀಯ ಮಸೀದಿ ಅಧ್ಯಕ್ಷ ಸಯ್ಯದ್ ಯಾಸೀನ್, ಉಡುಪಿ ಪಿಎಫ್‌ಐ ಕಮ್ಯುನಿಟಿ ಡೆವಲಪ್‌ಮೆಂಟ್ ವಿಭಾಗದ ಮುನೀರ್ ಕಲ್ಮಾಡಿ ಮುಖ್ಯ ಅತಿಥಿಗಳಾಗಿದ್ದರು.
ಸಂಸ್ಥೆಯ ಕಾರ್ಯದರ್ಶಿ ಪಿ.ಖಲೀಲ್ ಅಹ್ಮದ್, ಮುಹಮ್ಮದ್ ಮೌಲಾ, ಅಬ್ದುಲ್ ಗಫೂರ್ ಕಲ್ಯಾಣಪುರ ಮೊದಲಾದವರು ಉಪಸ್ಥಿತರಿದ್ದರು. ಅಧ್ಯಕ್ಷ ವಿ.ಎಸ್.ಉಮರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಹ್ಮದ್ ಕುಕ್ಕಿಕಟ್ಟೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರಕ್ತದಾನ ಶಿಬಿರದಲ್ಲಿ ಒಟ್ಟು 112 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.