ಎಂಆರ್ ಜಿ ಗ್ರೂಪ್ ನಿಂದ ಬಡವರಿಗೆ 1 ಕೋಟಿ ಮೌಲ್ಯದ ಅಗತ್ಯ ವಸ್ತುಗಳ ಕಿಟ್ ವಿತರಣೆ
ಉಡುಪಿ: ಎಂಆರ್ ಜಿ ಗ್ರೂಪ್ ಮುಖ್ಯಸ್ಥ ಬಂಜಾರಾ ಪ್ರಕಾಶ್ ಶೆಟ್ಟಿ ಅವರ ವತಿಯಿಂದ ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಒಂದು ಕೋಟಿಗೂ ಅಧಿಕ ಮೌಲ್ಯದ ಅಗತ್ಯ ವಸ್ತುಗಳ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಇಂದು ಕೊರಂಗ್ರಪಾಡಿ ನಾಗಬ್ರಹ್ಮಸ್ಥಾನದ ಬಳಿ ಚಾಲನೆ ನೀಡಲಾಯಿತು. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಐದು ಮಂದಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಕಿಟ್ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕೊರೊನಾ ಇಡೀ ಜಗತ್ತಿಗೆ ಅಂಟಿದ ಪಿಡುಗು. ಅದನ್ನು ಔಷಧಿಯ ಮೂಲಕ ತಡೆಗಟ್ಟುವುದು ಸದ್ಯಕ್ಕೆ ಅಸಾಧ್ಯವಾಗಿದೆ. ಆದ್ದರಿಂದ ಜನರು ಮನೆಯಲ್ಲಿಯೇ ಇದ್ದು, ಈ ಸೋಂಕನ್ನು ಹರಡದಂತೆ ತಡೆಗಟ್ಟುವ ಮೂಲಕ ಇದನ್ನು ಹತೋಟಿಗೆ ತರಬೇಕು ಎಂದರು. ಕೊರೊನಾ ಹರಡುವುದನ್ನು ತಡೆಗಟ್ಟುವ ಸಲುವಾಗಿ ಇಡೀ ದೇಶವನ್ನು ಲಾಕ್ ಡೌನ್ ಮಾಡಲಾಗಿದ್ದು, ಇದರಿಂದ ಸಾಕಷ್ಟು ಬಡವರು, ಕೂಲಿಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹವರ ಸಂಕಷ್ಟ ಅನೇಕ ಉದ್ಯಮಿಗಳು, ಸಂಘ ಸಂಸ್ಥೆಗಳು ಮುಂದೆ ಬಂದಿದ್ದು, ಅದರಲ್ಲಿ ಪ್ರಕಾಶ್ ಶೆಟ್ಟಿ ಅವರು ಕೂಡ ಪ್ರಮುಖರಾಗಿದ್ದಾರೆ. ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಬಡವರಿಗೆ ಒಂದು ಕೋಟಿಗೂ ಹೆಚ್ವಿನ ಮೌಲ್ಯದ ಆಹಾರ ವಸ್ತುಗಳ ಕಿಟ್ ವಿತರಿಸುವ ಮೂಲಕ ಅವರ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಬಡಗಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿ ಸಾಯಿನಾಥ್ ಹೆಗ್ಡೆ ದೊಡ್ಡಮನೆ ಕೊರಂಗ್ರಪಾಡಿ, ಮಟ್ಟಾರು ರತ್ನಾಕರ ಹೆಗ್ಡೆ, ಕೆ. ವಾಸುದೇವ ಶೆಟ್ಟಿ, ಪ್ರವೀಣ್ ಶೆಟ್ಟಿ, ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಮೊದಲಾದವರು ಉಪಸ್ಥಿತರಿದ್ದರು. 10 ಕೆ.ಜಿ. ಅಕ್ಕಿ, 4/1 ಚಾಹುಡಿ, 2 ಕೆಜಿ ಸಕ್ಕರೆ, 1 ಕೆಜಿ ಕಡಲೆ ಬೇಳೆ, ಎರಡು ಕಟ್ಟು ಸಾಂಬಾರು ಹುಡಿ ಒಳಗೊಂಡ ತಲಾ ಒಂದು ಸಾವಿರ ಮೌಲ್ಯದ ಕಿಟ್ ಗಳನ್ನು ವಿತರಣೆ ಮಾಡಲಾಯಿತು. ಕಾಪು, ಬ್ರಹ್ಮಾವರ, ಬಡಗಬೆಟ್ಟು, ಮಂಗಳೂರಿನಲ್ಲಿ ಕಿಟ್ ವಿತರಿಸುವ ಕಾರ್ಯಕ್ರಮ ನಡೆಯಲಿದೆ.
Gud job sir. god Bls u.