ಅಲ್ಪಸಂಖ್ಯಾತರಿಗೆ ಸರ್ಕಾರದ ಸೌಲಭ್ಯಗಳನ್ನು ಸಕಾಲದಲ್ಲಿ ತಲುಪಿಸಿ : ಡಿಸಿ ನಿರ್ದೇಶನ
ಮಡಿಕೇರಿ: ಅಲ್ಪಸಂಖ್ಯಾತರಿಗೆ ಮೀಸಲಿರುವ ಯೋಜನೆ ಕುರಿತ ಮಾಹಿತಿಯನ್ನು ಎಲ್ಲಾ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಿ ಅರ್ಹ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪಿಸಲು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಂಬಂಧಿಸಿದ ಪ್ರಧಾನಮಂತ್ರಿ ಅವರ ೧೫ ಅಂಶಗಳ ಕಾರ್ಯಕ್ರಮಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಸರ್ಕಾರದ ಪ್ರತಿಯೊಂದು ಯೋಜನೆಯಲ್ಲಿ ಶೇ.೧೫ ರಷ್ಟು ಅಲ್ಪಸಂಖ್ಯಾತರಿಗೆ ಮೀಸಲಿರುತ್ತದೆ. ಮೀಸಲಿರುವ ಪ್ರಮಾಣವನ್ನು ಸಂಪೂರ್ಣವಾಗಿ ಅಲ್ಪಸಂಖ್ಯಾತರ ಏಳಿಗೆಗೆ ತಲುಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಅಲ್ಪಸಂಖ್ಯಾತ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಶಾಲೆಗಳಲ್ಲಿ ಎಸ್ಎಸ್ಎಲ್ಸಿ ಫಲಿತಾಂಶವನ್ನು ಸುಧಾರಣೆಗೊಳಿಸಬೇಕು. ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ದಾಖಲು ಮಾಡಿಸುವಂತಾಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.