ಪರ್ಯಾಯಕ್ಕೆ ಭಕ್ಷ್ಯ ಭೋಜನ ತಯಾರಿ

ಉಡುಪಿ: ಅದಮಾರು ಪರ್ಯಾಯ ಮಹೋತ್ಸವದ ಅನ್ನಪ್ರಸಾದಕ್ಕೆ ಕೃಷ್ಣಮಠದ ಪಾರ್ಕಿಂಗ್‌ ಪ್ರದೇಶ ಸಮೀಪದ ಬೈಲಕೆರೆಯ ಒಂದೂವರೆ ಎಕರೆ ಪ್ರದೇದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. ಬಗೆಬಗೆಯ ಭಕ್ಷ್ಯ ಹಾಗೂ ಖಾದ್ಯಗಳ ತಯಾರಿ ಬಿರುಸಿನಿಂದ ಸಾಗಿದೆ.

ವಿಶಾಲವಾದ ಚಪ್ಪರದಲ್ಲಿ ಮುಖ್ಯ ಬಾಣಸಿಗ ವಿಷ್ಣುಮೂರ್ತಿ ಭಟ್‌ ಉದ್ಯಾವರ ಅವರ ನೇತೃತ್ವದಲ್ಲಿ 100ಕ್ಕೂ ಅಧಿಕ ಬಾಣಸಿಗರು ಭಕ್ಷ್ಯಗಳ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಪರಿಶುದ್ಧ ತೆಂಗಿನ ಎಣ್ಣೆ ಬಳಸಿ, ಒಂದು ಲಕ್ಷ ಜನರಿಗೆ ಬೇಕಾಗುವಷ್ಟು ಖಾದ್ಯಗಳ ತಯಾರಿ ನಡೆಯುತ್ತಿದೆ. ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಬಾಣಸಿಗರು ಕೆಲಸ ನಿರ್ವಹಿಸುತ್ತಿದ್ದಾರೆ.

ಪಲಿಮಾರು ಶ್ರೀಗಳು ಈಗಾಗಲೇ ಮಠದಲ್ಲಿ ಮೈದಾ ಹಾಗೂ ಸಕ್ಕರೆ ಬಳಕೆಗೆ ನಿಷೇಧ ಹೇರಿದ್ದು, ಅದಮಾರು ಪರ್ಯಾಯದ ವೇಳೆಯೂ ಮೈದಾ ಹಾಗೂ ಸಕ್ಕರ ಬಳಕೆಯನ್ನು ನಿಷೇಧಿಸಲಾಗಿದೆ. ಬೆಲ್ಲದ ಪಾಕದಿಂದ 60 ಸಾವಿರ ಲಾಡು, ಗೋಧಿ ಹಿಟ್ಟಿನ ಬರ್ಫಿ, 1.2 ಲಕ್ಷ ಅಕ್ಕಿ ವಡೆ ತಯಾರಿಸಲಾಗುತ್ತಿದೆ.

ಅದಮಾರು ಪರ್ಯಾಯದಲ್ಲಿ ಈಗಾಗಲೇ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ಪ್ಲಾಸ್ಟಿಕ್‌ ಲೋಟಗಳನ್ನು ನಿಷೇಧಿಸಿದ್ದು, 3 ಸಾವಿರ ಸ್ಟೀಲ್‌ ಲೋಟಗಳನ್ನು ಖರೀದಿಸಲಾಗಿದೆ. ಮುಂದಿನ ಎರಡು ವರ್ಷಗಳ ಪರ್ಯಾಯದ ಅವಧಿಯಲ್ಲಿ ಸ್ಟೀಲ್‌ ವಸ್ತುಗಳ ಬಳಕೆಗೆ ಒತ್ತು ನೀಡಲಾಗುವುದು ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ 

Leave a Reply

Your email address will not be published. Required fields are marked *

error: Content is protected !!