ದೆಹಲಿ ಗಲಭೆ: ಹುತಾತ್ಮ ಪೊಲೀಸ್ ಪೇದೆಗೆ 1 ಕೋಟಿ ಪರಿಹಾರ,ಬಲಿ 27 ಕ್ಕೆ ಏರಿಕೆ

ನವದೆಹಲಿ: ಹಿಂಸಾಚಾರ, ಕೋಮುಗಲಭೆ ಸ್ವರೂಪ ಪಡೆದಿರುವ ಸಿಎಎ ವಿರೋಧಿ ಪ್ರತಿಭಟನೆಗೆ ಬಲಿಯಾಗಿರುವವರ ಸಂಖ್ಯೆ 27 ಕ್ಕೆ ಏರಿಕೆಯಾಗಿದೆ. 

ಪೊಲೀಸರು ಗಲಭೆಕೋರರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಹಿಂಸಾಚಾರ ಘಟನೆ ಸಂಬಂಧ ಪೊಲೀಸರು ಈ ವರೆಗೂ 18 ಎಫ್ಐಆರ್ ಗಳನ್ನ ದಾಖಲಿಸಿದ್ದು, 106 ಜನರನ್ನು ಬಂಧಿಸಿದ್ದಾರೆ. 
 
ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸರು ಫೆ.26 ರಂದು ಅಹಿತಕರ ಘಟನೆಗಳು ಸಂಭವಿಸಿಲ್ಲ. ಪೊಲೀಸ್ ನಿಯಂತ್ರಣ ಕೊಠಡಿ(ಪಿಸಿಆರ್)ಗೆ ಬರುವ ಕರೆಗಳ ಸಂಖ್ಯೆ ಇಳಿಮುಖವಾಗಿದೆ -ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ ವಿಭಾಗ) ಮನ್ ದೀಪ್ ಸಿಂಗ್ ರಾಂಧವಾ ಹೇಳಿದ್ದಾರೆ. 

ಪೊಲೀಸರು ಹೆಲ್ಪ್ ಲೈನ್ ನಂಬರ್ ಗಳನ್ನು ನೀಡಿದ್ದು – 011-22829334, 22829335 ಸಂಕಷ್ಟದ ಸಮಯದಲ್ಲಿ ಸಂಪರ್ಕಿಸಲು ಸೂಚಿಸಿದ್ದಾರೆ.

ಇಂದು ವಿಧಾನಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್, ಹೊರಗಿನಿಂದ ಬಂದ ದುಷ್ಕರ್ಮಿಗಳು ದೆಹಲಿಯಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಸಹಜ ಸ್ಥಿತಿ ಮರಳಲು ಸೇನೆ ನಿಯೋಜಿಸುವ ಅಗತ್ಯ ಇದೆ ಎಂದು ಹೇಳಿದ್ದಾರೆ.

ದೆಹಲಿಯ ಜನ ಶಾಂತಿಯ ಜೀವನ ಬಯಸುತ್ತಿದ್ದಾರೆ. ಇಲ್ಲಿ ಎಲ್ಲರಿಗೂ ಶಾಂತಿ ಬೇಕಾಗಿದೆ. ಗಲಭೆ ಯಾರಿಗೂ ಬೇಕಾಗಿಲ್ಲ.  ದೆಹಲಿಯ ಹೊರಗಡೆಯವರು ಮತ್ತು ಕೆಲ ರಾಜಕೀಯ ಪಕ್ಷಗಳೇ ಈ ಗಲಭೆಗೆ ಕಾರಣ ಎಂದು ಆರೋಪಿಸಿದ್ದಾರೆ.

ಇದೇ ವೇಳೆ, ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಮುಖ್ಯ ಪೊಲೀಸ್ ಪೇದೆ ರತನ್ ಲಾಲ್ ಅವರಿಗೆ ದೆಹಲಿ ಸರ್ಕಾರ 1 ಕೋಟಿ ರೂಪಾಯಿ ಪರಿಹಾರ ನೀಡಲಿದೆ ಎಂದು ಕೇಜ್ರಿವಾಲ್ ಘೋಷಿಸಿದರು.

ದೆಹಲಿ ಸರ್ಕಾರದ ನೀತಿಯಂತೆ ನಾವು ಹುತಾತ್ಮ ಮುಖ್ಯ ಪೊಲೀಸ್ ಪೇದೆಯ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡುತ್ತೇವೆ ಎಂದರು.

Leave a Reply

Your email address will not be published. Required fields are marked *

error: Content is protected !!