ದೆಹಲಿ: ನಿಜಾಮುದ್ದೀನ್ ಮಸೀದಿಯಲ್ಲಿ ಧಾರ್ಮಿಕ ಸಭೆ, 1,034 ಮಂದಿ ಕ್ವಾರಂಟೈನ್ ಗೆ
ನವದೆಹಲಿ: ದೆಹಲಿಯ ನಿಜಾಮುದ್ದೀನ್ ಪ್ರದೇಶ ದೇಶದ ಕೊರೊನಾ ವೈರಸ್ ಸೋಂಕಿನ ಕೇಂದ್ರ ಸ್ಥಾನವಾಗಿ ಪರಿಣಮಿಸಿದೆ. ಇದೇ ತಿಂಗಳು ಮರ್ಕಜ್ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಗೆ ಹಾಜರಾಗಿದ್ದ ಹಲವರಲ್ಲಿ ಕೋವಿಡ್–19 ದೃಢಪಟ್ಟಿದೆ. ನಿಜಾಮುದ್ದೀನ್ ಮಸೀದಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಮರ್ಕಜ್ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದವರನ್ನು ಸೋಮವಾರ ರಾತ್ರಿ ಲೋಕ ನಾಯಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಈಗಾಗಲೇ ಕನಿಷ್ಠ 100 ಮಂದಿಗೆ ಸೋಂಕು ಪರೀಕ್ಷೆ ನಡೆಸಲಾಗಿದೆ. 8 ಅಂತಸ್ತಿನ ಕಟ್ಟಡದಲ್ಲಿರುವ ಜನರನ್ನು ಆಸ್ಪತ್ರೆಗೆ ಕಳುಹಿಸುವುದು ಮುಂದುವರಿದಿದೆ. ಈವರೆಗೆ 1,034 ಜನರನ್ನು ಸ್ಥಳಾಂತರಿಸಲಾಗಿದ್ದು, ಈ ಪೈಕಿ 334 ಜನರನ್ನು ಆಸ್ಪತ್ರೆಗೆ ಹಾಗೂ 700 ಮಂದಿಯನ್ನು ಕ್ವಾರಂಟೈನ್ ಕೇಂದ್ರಗಳಿಗೆ ಕರೆದೊಯ್ಯಲಾಗಿದೆ. ಬಸ್‌ಗಳಲ್ಲಿ ಸ್ಥಳಾಂತರಿಸಲಾಗುತ್ತಿದೆ. ಕಟ್ಟಡದಲ್ಲಿ ಸುಮಾರು 2,000 ಮಂದಿ ಇದ್ದರು. ಇವರಲ್ಲಿ 250 ಮಂದಿ ವಿದೇಶಿಯರೂ ಸೇರಿದ್ದಾರೆ. ಸಾಮೂಹಿಕವಾಗಿ ಅಡುಗೆ ತಯಾರಿಸಿ, ಎಲ್ಲರೂ ಜೊತೆಯಾಗಿ ಒಂದೇ ಜಾಗದಲ್ಲಿ ಆಹಾರ ಸೇವಿಸಿದ್ದಾರೆ. ಮಾರ್ಚ್ 1ರಿಂದ15ರ ವರೆಗೂ ನಡೆದ ತಬ್ಲಿಗಿ ಜಮಾಅತ್ ಧಾರ್ಮಿಕ ಸಭೆಯಲ್ಲಿ ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ ಹಲವು ರಾಷ್ಟ್ರಗಳಿಂದ 2,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಿದ್ದರು.
ತಬ್ಲಿಗಿ ಜಾಮಾಅತ್‌ನ ಮುಖ್ಯ ಕಚೇರಿಯಲ್ಲಿದ್ದವರ ಪೈಕಿ ಕನಿಷ್ಠ 37 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಭಾನುವಾರ 24 ಜನರಲ್ಲಿ ಸೋಂಕು ದೃಢಪಟ್ಟಿತ್ತು.
ಇಲ್ಲಿನ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ಏಳು ಮಂದಿ ಸೋಮವಾರ ಹೈದರಾಬಾದ್‌ನಲ್ಲಿ ಸಾವಿಗೀಡಾಗಿದ್ದಾರೆ. ಶ್ರೀನಗರದಲ್ಲಿ ಒಬ್ಬ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ. ದಕ್ಷಿಣ ದೆಹಲಿ ಭಾಗದಲ್ಲಿ ಪೊಲೀಸರು ಸಂಪೂರ್ಣ ನಿರ್ಬಂಧ ಹೇರಿದ್ದು, ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ವೈದ್ಯಕೀಯ ತಂಡ ಸ್ಥಳದಲ್ಲಿದೆ.
ಸಭೆಯಲ್ಲಿ ಭಾಗಿಯಾಗಿದ್ದವರು ಕರ್ನಾಟಕ, ತೆಲಂಗಾಣ, ಬಿಹಾರ ಹಾಗೂ ಒಡಿಶಾ ರಾಜ್ಯಗಳಲ್ಲಿ ಸಂಚರಿಸಿರುವುದು ತಿಳಿದು ಬಂದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಸಾವಿಗೀಡಾಗಿರುವ ವ್ಯಕ್ತಿಯೂ ಇದೇ ಸಭೆಯಲ್ಲಿ ಭಾಗಿಯಾಗಿದ್ದನ್ನು ಕಂಡುಕೊಳ್ಳಲಾಗಿದೆ.
ನಿಜಾಮುದ್ದೀನ್ ಪೂರ್ವ ವಲಯದಲ್ಲಿ ಮರ್ಕಜ್ ಅಥವಾ ಬಂಗ್ಲೇವಾಲಿ ಮಸೀದಿಗೆ ಕಟ್ಟಡಕ್ಕೆ ಹೊಂದಿ ಕೊಂಡಂತೆ ನಿಜಾಮುದ್ದೀನ್ ಪೊಲೀಸ್ ಠಾಣೆ ಇದೆ. ಈ ವಲಯದಲ್ಲಿ ಸುಮಾರು 25,000 ಮಂದಿ ವಾಸಿಸುತ್ತಿದ್ದಾರೆ. ತಬ್ಲಿಗಿ ಜಮಾಅತ್ ವಿರುದ್ಧ ದೆಹಲಿ ಸರ್ಕಾರ ಎಫ್‌ಐಆರ್ ದಾಖಲಿಸಲು ಮುಂದಾಗಿದೆ.