ಸೆಲ್ಫಿ ತೆಗೆದುಕೊಳ್ಳುವ ಸಂದರ್ಭ ನದಿಗೆ ಬಿದ್ದು ನವದಂಪತಿ ಸಾವು

ಸಕಲೇಶಪುರ:ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಆಯತಪ್ಪಿ ಹೇಮಾವತಿ ನದಿಗೆ ಬಿದ್ದು ನವದಂಪತಿಗಳು ಸಾವನ್ನಪ್ಪಿದ್ದ ಧಾರುಣ ಘಟನೆ ಸಕಲೇಶಪುರದ ಸಮೀಪದ ಹೆನ್ನಲಿ ಗ್ರಾಮದ ಬಳಿ ಗುರುವಾರ ಸಂಜೆ ನಡೆದಿದೆ.

ಹೆನ್ನಲಿಯ ರೈತ ಕೃಷ್ಣಮೂರ್ತಿ ಅವರ ಪುತ್ರಿ ಕೃತಿಕಾ (23), ಬೇಲೂರು ತಾಲ್ಲೂಕು ಮುರೇಹಳ್ಳಿ ಗ್ರಾಮದ ರೈತ ಎಂ.ಆರ್‌. ರುದ್ರಪ್ಪಗೌಡ ಅವರ ಪುತ್ರ ಆರ್ಥೀಶ್‌ (27) ಮೃತಪಟ್ಟ ದುರ್ದೈವಿಗಳು .

ರಾತ್ರಿ ಕೃತಿಕಾ ಶವ, ಶುಕ್ರವಾರ ಬೆಳಿಗ್ಗೆ ಆರ್ಥೀಶ್‌ ಶವ ಪತ್ತೆಯಾಗಿದೆ. ಇವರ ವಿವಾಹ ಮಾರ್ಚ್‌ 20ರಂದು ನಡೆದಿತ್ತು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಲಾಕ್‌ಡೌನ್‌ನಿಂದಾಗಿ ಊರಿನಲ್ಲಿಯೇ ಉಳಿದಿದ್ದರು.


ಹೇಮಾವತಿ ನದಿಗೆ ನಿರ್ಮಿಸಿರುವ ಚೆಕ್‌ಡ್ಯಾಂ ಬಳಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ, ಮಳೆಯಿಂದ ಸಡಿಲವಾಗಿದ್ದ ಮಣ್ಣು ಕುಸಿದು ಅವಘಡ ಸಂಭವಿಸಿದೆ. 20 ಅಡಿ ಆಳವಿದ್ದ ನೀರಿನ ಗುಂಡಿಗೆ ಇಬ್ಬರು ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
‘ಮನೆಯವರ ಹೇಳಿಕೆಯಂತೆ ಮದುವೆ ಆದ ದಿನದಿಂದ ಇಬ್ಬರ ನಡುವೆ ಸಣ್ಣ ಪುಟ್ಟ ಜಗಳವೂ ಆಗಿರಲಿಲ್ಲ. ಹಾಗಾಗಿ, ಇದು ಆತ್ಮಹತ್ಯೆ ಪ್ರಕರಣವಲ್ಲ’ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!