ಕಾನೂನುಬಾಹಿರ ಮೀನುಗಾರಿಕೆ ತಡೆಗೆ ಡಿಸಿಗೆ ಸೂಚನೆ: ಮಹೇಶ್ವರ

ಉಡುಪಿ: ಜಿಲ್ಲೆಯ ಜಿಲ್ಲಾಸ್ಪತ್ರೆಗಳಲ್ಲಿ ದಾಖಲಾಗುವ ಅನಾಥ ರೋಗಿಗಳ ಆರೈಕೆಗಾಗಿ
ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಹಯೋಗದಲ್ಲಿ ಅನಾಥಾಲಯ ಆರಂಭಿಸುವ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಸೂಚಿಸಿದ್ದಾರೆ. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಜಿಲ್ಲಾ ಆಸ್ಪತ್ರೆಗೆ ಸಮಾಜಸೇವಕರು ಮತ್ತು ಸಾರ್ವಜನಿಕರು ಅನಾಥ ರೋಗಿಗಳನ್ನು ದಾಖಲಿಸುತ್ತಿದ್ದು, ಇವರಿಗೆ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಥಳಾವಕಾಶದ ಕೊರತೆ ಇರುವ ಬಗ್ಗೆ ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್ ತಿಳಿಸಿದರು, ಈ ಕುರಿತಂತೆ ಅನಾಥ ರೋಗಿಗಳ ಆರೈಕೆಗಾಗಿ ಜಿಲ್ಲೆಯಲ್ಲಿ ಅನಾಥಾಲಯ ಆರಂಭಿಸುವಂತೆ ಮತ್ತು ಜಿಲ್ಲಾಸ್ಪತ್ರೆಯಿಂದ ಸೂಚಿಸುವ ಅನಾಥರೋಗಿಗಳನ್ನು ಕಡ್ಡಾಯವಾಗಿ ದಾಖಲು ಮಾಡಿಕೊಳ್ಳುವಂತೆ ತಿಳಿಸಿದ ಮಹೇಶ್ವರ ರಾವ್, ಈ ಅನಾಥಾಲಯಕ್ಕೆ ಜಿಲ್ಲಾ
ಖನಿಜ ನಿಧಿಯಿಂದ ಕೂಡ ಅಗತ್ಯ ಆರ್ಥಿಕ ನೆರವು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಉಡುಪಿ ಜಿಲ್ಲಾಸ್ಪತ್ರೆ ಇದುವರೆಗೂ ತಾಲೂಕು ಆಸ್ಪತ್ರೆ ಮಾದರಿಯಲ್ಲಿಯೇ ಇದ್ದು, ಇದನ್ನು ಜಿಲ್ಲಾಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ ಕೋರಿದರು.

ಈ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದ ಮಹೇಶ್ವರ ರಾವ್, ಪ್ರಸ್ತುತ ಆಸ್ಪತ್ರೆಯಲ್ಲಿ ದಾಖಲಾಗುತ್ತಿರುವ ಒಳರೋಗಿಗಳ ಸಂಖ್ಯೆ, ಚಿಕಿತ್ಸೆಗೆ ಆಗಮಿಸುತ್ತಿರುವ ಹೊರರೋಗಿಗಳ ಸಂಖ್ಯೆ ಕುರಿತಂತೆ ವಿವರಗಳನ್ನು ನೀಡುವಂತೆ ಜಿಲ್ಲಾ ಸರ್ಜನ್‍ಗೆ ಸೂಚಿಸಿದ ಅವರು, ಈ ಬಗ್ಗೆ ಸಂಬಂದಪಟ್ಟವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಮುಂತಾದ ರೋಗಗಳ ಹರಡುವಿಕೆ ಕುರಿತಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ ಅವರು, ಶಾಲಾ ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ
ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಮತ್ತು ಜಿಲ್ಲೆಯ ಎಲ್ಲಾ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೆಂದ್ರಗಳಲ್ಲಿ ಚಿಕಿತ್ಸೆಗಾಗಿ ಖರೀದಿಸಿರುವ ಉಪಕರಣಗಳು ಸಮರ್ಪಕವಾಗಿ ಬಳಕೆಯಾಗುತ್ತಿರುವ ಬಗ್ಗೆ ವರದಿ ನೀಡುವಂತೆ ಸೂಚಿಸಿದರು.


ಜಿಲ್ಲೆಯ ಎಲ್ಲಾ ಅಂಗನವಾಡಿಗಳಲ್ಲಿ ಎಲ್ಲಾ ಸೌಕರ್ಯಗಳು ಇರುವ ಬಗ್ಗೆ ಹಾಗೂ ಅವುಗಳ ಸಮರ್ಪಕ ಕಾರ್ಯ ನಿರ್ವಹಣೆಯನ್ನು ಪರಿಶೀಲಿಸುವ ನಿಟ್ಟಿನಲ್ಲಿ, ವಾರದಲ್ಲಿ ಒಂದು ದಿನ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಅಲ್ಲಿ ನೀಡುವ ಆಹಾರದ ಗುಣಮಟ್ಟ, ನೈರ್ಮಲ್ಯ ಮುಂತಾದವುಗಳ ಕುರಿತು ವರದಿ ನೀಡುವಂತೆ ಸೂಚಿಸಿದ ಮಹೇಶ್ವರ ರಾವ್, ತಪಾಸಣೆ ವೇಳೆ ಪರಿಶೀಲಿಸಬೇಕಾದ ಅಂಶಗಳ ಕುರಿತ ಚೆಕ್‍ಲಿಸ್ಟ್ ಸಿದ್ದಪಡಿಸಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾಧಿಕಾರಿ ಗ್ರೇಸಿ ಗೊನ್ಸಾಲ್ವಿಸ್ ಅವರಿಗೆ ಸೂಚಿಸಿದರು, ಜಿಲ್ಲೆಯಲ್ಲಿ ಯಾವುದೇ
ಗರ್ಭಿಣಿ ಮತ್ತು ಮಗು ಅಪೌಷ್ಠಿಕತೆಯಿಂದ ಬಳಲದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.


ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಕುರಿತಂತೆ, ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿಯ ಪೈ ಓವರ್ ಮತ್ತು ಕೋಟೇಶ್ವರ ಅಂಡರ್‍ಪಾಸ್ ಕಾಮಗಾರಿ ವಿಳಂಬ ಕುರಿತು, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದ ಕಾರ್ಯದರ್ಶಿಗಳು, ಜಿಲ್ಲೆಯಲ್ಲಿ ಫಾಸ್ಟ್‍ಟ್ಯಾಗ್‍ಗಳು ನಿಗಧಿತ ಪ್ರಮಾಣದಲ್ಲಿ ದೊರೆಯದ ಕುರಿತು ಸಹ ಚರ್ಚಿಸುವುದಾಗಿ ತಿಳಿಸಿದರು.


ಮೀನುಗಾರಿಕೆಗೆ ಸಂಬಂದಿಸಿದಂತೆ, ನಿಗಧಿತ ಪ್ರಮಾಣಕ್ಕಿಂತ ಹೆಚ್ಚಿನ ಸಾಮಥ್ರ್ಯದ ಇಂಜಿನ್ ಅಳವಡಿಕೆ, ಜಿಲ್ಲೆಯಲ್ಲಿ, ಸಣ್ಣ ಮೀನು ಹಿಡಿಯುವಿಕೆ, ಬೆಳಕು ಮೀನುಗಾರಿಕೆ, ಬುಲ್ ಟ್ರಾಲಿಂಗ್ ಸೇರಿದಂತೆ ಎಲ್ಲಾ ರೀತಿಯ ಕಾನೂನುಬಾಹಿರ ಮೀನುಗಾರಿಕೆ
ತಡೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಹೇಶ್ವರ ರಾವ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.


ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವಂತೆ ಸೂಚಿಸಿದ ಕಾರ್ಯದರ್ಶಿಗಳು, ಜಿಲ್ಲೆಯ ಕನಿಷ್ಠ 50 ಗ್ರಾಮಗಳಲ್ಲಿ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸುವಂತೆ ಮತ್ತು ಪ್ರಾಕೃತಿಕ ವಿಕೋಪದಿಂದ ಹಾನಿಯಾದ ರಸ್ತೆ ಮತ್ತು
ಕಟ್ಟಡಗಳ ದುರಸ್ತಿ ಕಾಮಗಾರಿಯನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ಸೂಚಿಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಟಿಇಟಿ ಪರೀಕ್ಷೆ ಕುರಿತಂತೆ ಅಗತ್ಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಡಿಡಿಪಿಐ ಗೆ ಸೂಚಿಸಿದ ಮಹೇಶ್ವರ ರಾವ್,
ಜಿಲ್ಲೆಯಲ್ಲಿ ಆರಂಭಿಸಿರುವ ಅಟಲ್ ಟಿಂಕರ್ ಲ್ಯಾಬ್‍ಗಳ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.


Leave a Reply

Your email address will not be published. Required fields are marked *

error: Content is protected !!