ದಲಿತ,ಬಂಡಾಯ,ಪ್ರಗತಿಶೀಲ ಬರಹಕಾರರು ಎಂಬ ಹಣೆಪಟ್ಟಿ ತಾತ್ಕಾಲಿಕ: ಡಾ.ಸಿದ್ದಲಿಂಗಯ್ಯ

ಉಡುಪಿ: ಬದುಕನ್ನು ಸಹ್ಯವಾಗಿಸುವ, ಬದುಕುವ ಆಸೆಯನ್ನು ಹುಟ್ಟಿಸುವ, ಕಷ್ಟವನ್ನು ಮರೆಸುವಂತಹ ಸಾಹಿತ್ಯ ರಚನೆ ಇಂದಿನ ಅಗತ್ಯ ಎಂದು ಕವಿ ಡಾ.ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.

ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅವರ 11 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ದಲಿತ, ಬಂಡಾಯ, ನವ್ಯ, ನವೋದಯ, ಪ್ರಗತಿಶೀಲ ಬರಹಕಾರರು ಎಂಬ ಹಣೆಪಟ್ಟೆಗಳು ತಾತ್ಕಾಲಿಕ. ಕೊನೆಗೆ ಉಳಿಯುವುದು ಗಟ್ಟಿಯಾದ ಸಾಹಿತ್ಯ ಮಾತ್ರ. ಸಮಾಜದ ವಿಕೃತಿಯನ್ನು ಅಳಿಸಿ, ಸುಂದರ ಸಮ ಸಮಾಜವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಬರವಣಿಗೆ ಮೂಡಿಬರಬೇಕು ಎಂದು ಹೇಳಿದರು.

‘ಜನರನ್ನು ಚಿಂತನೆಗೆ ಹಚ್ಚುವ, ಹುಮ್ಮುಸ್ಸು ಲವಲವಿಕೆಯನ್ನು ಉಂಟುಮಾಡುವ ಬರವಣಿಗೆ ಮಾತ್ರ ಸಾರ್ಥಕ ಪಡೆಯುತ್ತದೆ. ಉಳಿದವು ನಿರರ್ಥಕವಾಗುತ್ತದೆ. ‌ಕವಿತೆಗಳಿಗೆ ತನ್ನದೇ ಶಕ್ತಿ ಇದ್ದು, ಅದನ್ನು ಅರ್ಥಮಾಡಿಕೊಂಡು ಕವಿಗಳು ಜವಾಬ್ದಾರಿಯಿಂದ ಲೇಖನಿಯನ್ನು ಬಳಸಬೇಕು’ ಎಂದರು.

ಜನರು ಓದಿನಿಂದ ವಿಮುಖರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಸಮಾಜದಲ್ಲಿ ಪುಸ್ತಕ ಪ್ರೀತಿ ಹೆಚ್ಚಾಗಬೇಕು. ಇದಕ್ಕೆ ಪೂರಕವಾಗಿ ಉತ್ತಮ ಪುಸ್ತಕಗಳು ಹೊರಬರಬೇಕು ಎಂದು ಸಿದ್ದಲಿಂಗಯ್ಯ ಹೇಳಿದರು.

‌ಡಾ.ಕಾತ್ಯಾಯಿನಿ ಅವರ ಬರವಣಿಗೆಯಲ್ಲಿ ವೈಶಿಷ್ಟ್ಯತೆ, ವೈಚಾರಿಕತೆ ಅಡಗಿದೆ. ಸೂಕ್ಷ್ಯ ವಿಷಯಗಳ ಗ್ರಹಿಕೆ ಇದೆ. ಅವರ ಕವನಗಳು ಮನಮುಟ್ಟುವಂತಿವೆ. ಬರವಣಿಗೆ ನಿರಂತರವಾಗಿ ಸಾಗಲಿ. ಮತ್ತಷ್ಟು ಉತ್ತಮ ಕಾದಂಬರಿ, ಕೃತಿ, ಕವಿತೆಗಳು ಸಾಹಿತ್ಯ ಜಗತ್ತಿಗೆ ಸಿಗಲಿ ಎಂದು ಹಾರೈಸಿದರು.

ಸಂಸ್ಕೃತಿ ಚಿಂತಕರಾದ ಲಕ್ಷ್ಮೀಶ ತೋಳ್ಪಾಡಿ ಅವರು ಕಾಯಕಾವ್ಯ ಕವನ ಸಂಕಲನ ಕುರಿತು ಮಾತನಾಡಿ, ‘ಕಾತ್ಯಾಯಿನಿ ಅವರ ಕವಿತೆಗಳಲ್ಲಿ ಆಪ್ತತೆ ಕಾಣಬಹುದು. ಕವಿ ಸ್ವಂತ ಅನುಭವಗಳನ್ನು ಪದಗಳಲ್ಲಿ ಕಟ್ಟಿಕೊಡುವುದು ಬಹಳ ಕಷ್ಟ. ಆದರೆ, ಇಲ್ಲಿ ಪದಗಳಿಗೆ ಜೀವ ತುಂಬಲಾಗಿದೆ’ ಎಂದರು.


ಸಾಹಿತಿ ಶೂದ್ರ ಶ್ರೀನಿವಾಸ ಅವರು ತೊಗಲುಗೊಂಬೆ ಕಾದಂಬರಿ ಕುರಿತು ಮಾತನಾಡಿ, ‘ಬಿಡುಗಡೆಗೊಂಡ ಕೃತಿಗಳಲ್ಲಿ ಸೂಕ್ಷ್ಮವಾದ ಜೀವನ ದೃಷ್ಟಿ ಅಡಗಿದೆ. ಬದುಕನ್ನು ನೋಡುವ ದೃಷ್ಟಿಕೋನ ವಿಭಿನ್ನವಾಗಿದೆ’ ಎಂದು ಶ್ಲಾಘಿಸಿದರು.

‘ಬರಹಗಾರ ಯಾವತ್ತಿಗೂ ನನ್ನ ಧರ್ಮ, ಭಾಷೆಯೇ ದೊಡ್ಡದು ಎಂಬ ನಿರ್ಧಾರವನ್ನು ಬರವಣಿಗೆಯಲ್ಲಿ ಅಭಿವ್ಯಕ್ತಗೊಳಿಸಬಾರದು’ ಎಂದು ಅಭಿಪ್ರಾಯಪಟ್ಟರು.

ರಂಗಕರ್ಮಿ ಗೋಪಾಲಕೃಷ್ಣ ನಾಯರಿ ಅವರು ಜೋಡಿ ಕಾಯಿ, ಪಗಡೆಹಾಸು ನಾಟಕಗಳ ಕುರಿತು ಮಾತನಾಡಿದರು. ವಿಮರ್ಶಕ ಎಚ್‌.ದಂಡಪ್ಪ ತೀರದ ಹೆಜ್ಜೆ, ಅಕ್ಕಕೇಳವ್ಪ ಹಾಗೂ ಪಂಜೆ ಮಂಗೇಶರಾಯರು ವಾಚಿಕೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

ಕವಿ ಮುದಲ್ ವಿಜಯ ಅವರು ಜೀವ ವಿಹಂಗಮ, ಪಳಕಳ ಸೀತಾರಾಮ ಭಟ್ಟ ಬದುಕ ಬರಹ ಕೃತಿಯ ಬಗ್ಗೆ ಮಾತನಾಡಿದರು. ಸಾಹಿತಿ ಡಾ.ನಿಕೇತನ ಅವರು ಗುಳಿಯಪ್ಪ ಕೋರೆಹಲ್ಲು, ಐದು ಮಕ್ಕಳ ನಾಟಕಗಳ ಬಗ್ಗೆ ಅನಿಸಿಕೆ ಹೇಳಿದರು.

ಪಂಡಿತ್ ರವಿಕಿರಣ್‌ ಮಣಿಪಾಲ ಅವರ ಗಾಯನ, ಶಶಿಕಿರಣ್ ಮಣಪಾಲ ಅವರ ತಬಲ, ಸುಮಂತ ಭಟ್ ಅವರ ಹಾರ್ಮೋನಿಯಂನಲ್ಲಿ ಮೂಡಿದ ಹಿಂದೂಸ್ತಾನಿ ಸಂಗೀತ ಹಿಂಪಾಗಿತ್ತು. ಅಕಾಡೆಮಿ ಆಫ್ ಜನರಲ್ ಎಜುಕೇಷನ್‌ ಆಡಳಿತಾಧಿಕಾರಿ ಡಾ.ಎಚ್‌.ಶಾಂತಾರಾಮ್ ಅಧ್ಯಕ್ಷತೆ ವಹಿಸಿದ್ದರು.

ಸಾಹಿತಿ ವೈದೇಹಿ ರಚನೆಯ ಕಮಲಾದೇವಿ ಚಟ್ಟೊಪಾಧ್ಯಾಯ –ಕೆಲವು ನಾಟಕಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಚಾಲನೆ ನೀಡಿದರು. ಡಾ.ಕಾತ್ಯಾಯಿನಿ ಕುಂಜಿಬೆಟ್ಟು ವಂದಿಸಿದರು.

Leave a Reply

Your email address will not be published. Required fields are marked *

error: Content is protected !!