ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೈಬರ್ ಸೆಲ್: ಬಿ.ಎಸ್.ವೈ

ಬೆಂಗಳೂರು: ಹೆಚ್ಚುತ್ತಿರುವ ಸೈಬರ್ ಕ್ರೈಂ ಹಾಗೂ ಮಾದಕ ವಸ್ತು ಜಾಲದ ಮೇಲೆ ನಿಗಾವಹಿಸಿ ಪತ್ತೆಮಾಡಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೈಬರ್ ಸೆಲ್ ಗಳನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ.

ನಗರ ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ಏರ್ಪಡಿಸಿದ್ದ ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಹುತಾತ್ಮರಿಗೆ ಗೌರವ ವಂದನೆ ಸಲ್ಲಿಸಿ ಮಾತನಾಡಿದ ಅವರು, ಈಗಾಗಲೇ ನಗರದ 8 ಡಿಸಿಪಿ ಕಚೇರಿಗಳಲ್ಲಿ ಸೈಬರ್ ಸೆಲ್‌ಗಳ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ ಎಂದರು. ರಾಜ್ಯದಲ್ಲಿ ಇತ್ತೀಚೆಗೆ ಆರ್ಥಿಕ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ದೊಡ್ಡ ಸವಾಲಾಗಿದೆ. ಆದ್ದರಿಂದ ಎಲ್ಲಾ  ಜಿಲ್ಲಾ ಕೇಂದ್ರಗಳಲ್ಲೂ ಸೈಬರ್ ಸೆಲ್‌ಗಳನ್ನು ಸ್ಥಾಪಿಸಿ, ಆರ್ಥಿಕ ಅಪರಾಧಗಳು, ಆನ್ ಲೈನ್‌ನಲ್ಲಿ ನಡೆಸುವ ವಂಚನೆ, ಅಕ್ರಮಗಳು, ಗಾಂಜಾ, ಕೊಕೇನ್ ಇನ್ನಿತರ ಮಾದಕ ವಸ್ತುಗಳ ದಂಧೆಯನ್ನು ಮಟ್ಟಹಾಕಲಾಗುವುದು ಎಂದು ತಿಳಿಸಿದರು.

ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿ – ಧಾರವಾಡಗಳಲ್ಲಿ ಮಹಿಳಾ ಪೊಲೀಸ್ ಠಾಣೆಗಳನ್ನು ಒನ್ ಸ್ಟಾಪ್ ಸೇವಾ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಪೊಲೀಸ್ ಠಾಣೆಗಳಲ್ಲಿ ಮಹಿಳೆಯರಿಗೆ ಅಗತ್ಯ ಇರುವ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು, ಎಸ್ಪಿಗಳು, ಡಿವೈಎಸ್ಪಿಗಳಿಗೆ ಪ್ರತ್ಯೇಕ ಮೊಬೈಲ್ ಆಪ್ ವ್ಯವಸ್ಥೆ ಕಲ್ಪಿಸಿ, ಸಾರ್ವಜನಿಕರು ಸಮಸ್ಯೆ ಹಾಗೂ ಅಹವಾಲುಗಳಿಗೆ ಪರಿಹಾರ ಒದಗಿಸಲಾಗುವುದು, ಪೊಲೀಸರನ್ನು ಜನಸ್ನೇಹಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಈಗಾಗಲೇ ಪೊಲೀಸರಿಗೆ ವಸತಿ ಸೌಲಭ್ಯ ಕಲ್ಪಿಸಲು 8,258 ಮನೆಗಳನ್ನು ನಿರ್ಮಾಣ  ಮಾಡಲಾಗಿದ್ದು, ಮುಂದಿನ ವರ್ಷದಲ್ಲಿ ಎಲ್ಲಾ ಪೊಲೀಸರಿಗೂ ವಸತಿ ಸೌಲಭ್ಯ ಕಲ್ಪಿಸಲು ಕ್ರಮ  ಕೈಗೊಳ್ಳಲಾಗುವುದು ಎಂದು ಹೇಳಿದರು.

ಹೆದ್ದಾರಿಗಳು, ಇನ್ನಿತರ ರಸ್ತೆಗಳಲ್ಲಿ  ಸಂಭವಿಸುವ ಅಪಘಾತಗಳಲ್ಲಿ ಗಾಯಗೊಂಡಿರುವವರಿಗೆ ಕೂಡಲೇ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲು  233 ಗಸ್ತು ವಾಹನಗಳನ್ನು ನೀಡಲಾಗುವುದು. ಪೊಲೀಸ್ ಇಲಾಖೆಗೆ ಸಿಬ್ಬಂದಿ, ಅಧಿಕಾರಿಗಳು ಸೇರಿ ಒಟ್ಟು 16 ಸಾವಿರ ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದ್ದು, ನೇಮಕಾತಿಯು ಹಂತಹಂತವಾಗಿ ಮುಂದುವರೆಯಲಿದೆ. ಪೊಲೀಸ್ ಇಲಾಖೆಯನ್ನು ಆಧುನೀಕರಣಗೊಳಿಸಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ರಾಜ್ಯದಲ್ಲಿ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ವೀರಪ್ಪ ತಾಟಪ್ಪ ಲಾಠಿ ಸೇರಿದಂತೆ, 12 ಮಂದಿ ಪೊಲೀಸ್  ಸಿಬ್ಬಂದಿ ರಾಜ್ಯದಲ್ಲಿ ಹುತಾತ್ಮರಾಗಿದ್ದಾರೆ. ದೇಶದಲ್ಲಿ ಪೊಲೀಸ್ ಸಿಬ್ಬಂದಿ, ಗಡಿ  ಭದ್ರತಾ ಸಿಬ್ಬಂದಿ, ರಕ್ಷಣಾ ಪಡೆ ಸೇರಿದಂತೆ, 292 ಮಂದಿ ಹುತಾತ್ಮರಾಗಿದ್ದಾರೆ.  ಇವರೆಲ್ಲರಿಗೂ ಗೌರವ ವಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗೃಹ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು, ಡಿಜಿಪಿಗಳಾದ ಎಂ.ಎನ್. ರೆಡ್ಡಿ, ಔರಾದ್‌ಕರ್, ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೇರಿದಂತೆ, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!