ಗೋವು ತಿನ್ನುವವರು ವೃದ್ಧ ತಂದೆಯನ್ನು ತಿನ್ನಲು ಹೇಸಲ್ಲ; ಯೋಗ ಗುರು ವಿವಾದಾತ್ಮಕ ಹೇಳಿಕೆ
ಉಡುಪಿ: ಗೋವು ತಿನ್ನುವವರು ವೃದ್ಧ ತಂದೆಯನ್ನು ತಿನ್ನಲು ಹೇಸಲ್ಲ ಎಂದು ಯೋಗ ಗುರು ಬಾಬಾ ರಾಮ್ ದೇವ್ ವಿವಾದಾತ್ಮಕ ಹೇಳಿಕೆ ನೀಡಿದ್ದು ಚರ್ಚೆಗೆ ಕಾರಣವಾಗಿದೆ. ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲಿ ಮಂಗಳವಾರ ಸಂತ ಸಮ್ಮೇಳನ ನಡೆದಿದ ಸಭೆಯಲ್ಲಿ ಅಷ್ಟ ಮಠದ ಸ್ವಾಮೀಜಿಗಳು ಸೇರಿದಂತೆ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿಯ 18 ಸಂತರು ಪಾಲ್ಗೊಂಡಿದ್ದರು. ಸಭೆಯಲ್ಲಿ ಮಾತನಾಡಿದ ರಾಮ್ ದೇವ್, ಗೋವು ಭಕ್ಷಕರೇ, ಮಾಂಸ ತಿನ್ನಲೇ ಬೇಕಂದರೆ ತಿನ್ನಿ. ಆದರೆ ಗೋವಿನ ಮಾಂಸ ಮಾತ್ರ ತಿನ್ನಬೇಡಿ. ಕೋಳಿ, ಮೀನು, ಕುದುರೆ, ಕತ್ತೆ, ನಾಯಿ, ಏನಾದರೂ ತಿನ್ನಿ ಎಂದು ಹೇಳಿದರು.
ಗೋವು ತಾಯಿಗೆ ಸಮಾನ. ಅದನ್ನು ತಿನ್ನುತ್ತಿರಿ ಅಂದ್ರೆ ನಿಮ್ಮ ವೃದ್ಧ ತಂದೆಯನ್ನು ತಿನ್ನಲು ಹೇಸಲ್ಲ. ಭಾರತೀಯ ಮುಸಲ್ಮಾನರಿಗೆ ಕ್ರೂರ ಮೊಘಲರ ಆಡಳಿತ ಆದರ್ಶವಾಗಬಾರದು. ಭಾರತೀಯ ಮುಸಲ್ಮಾನರು ನಮ್ಮವರೇ, ಗೋಹತ್ಯಾ ನಿಷೇಧ ಬೆಂಬಲಿಸಬೇಕು. ಅಕ್ಬರ್, ಬಾಬರ್, ಹುಮಾಯೂನ್, ಔರಂಗಜೇಬನ ಕಾಲದಲ್ಲೂ ಗೋ ಹತ್ಯಾ ನಿಷೇಧ ಇತ್ತು ಆದರೆ ಈಗ ಯಾಕಿಲ್ಲ? ವಿರೋಧ ಯಾಕೆ ಎಂದು ಪ್ರಶ್ನಿಸಿದರು.
ಗೋವು ನಮ್ಮ ತಾಯಿ ಎಂದು ಹೇಳಿದರೆ ಕೆಲವರು ಕೋಣವನ್ನು ತಂದೆ ಅಂತ ಅಪಹಾಸ್ಯ ಮಾಡುತ್ತಾರೆ. ಗ್ಲೋಬಲ್ ವಾರ್ಮಿಂಗ್ ಗೆ ಮಾಂಸಹಾರವೇ ಅತೀಮುಖ್ಯ ಕಾರಣ. ನನ್ನ ಮೇಲೆ ಸಾವಿರಕ್ಕೂ ಅಧಿಕ ಕೇಸ್ ಇದೆ. ಟುಕ್ಡೇ ಟುಕ್ಡೇ ಗ್ಯಾಂಗ್, ಕಮ್ಯುನಿಸ್ಟ್ ರು ಸರಣಿಯಾಗಿ ನನ್ನ ವಿರುದ್ಧ ದೂರು ದಾಖಲಿಸಿದ್ದಾರೆ. ನಾನು ಇದಕ್ಕೆಲ್ಲಾ ಭಯ ಪಡುವುದಿಲ್ಲ ಎಂದು ಬಾಬಾ ರಾಮ್ ದೇವ್ ಚರ್ಚಾಸ್ಪದ ಹೇಳಿಕೆ ನೀಡಿದರು