ಕೋವಿಡ್ ಹಗರಣ: ತನಿಖೆಗೆ ನಿವೃತ್ತ ನ್ಯಾ. ಜಾನ್ ಮೈಕಲ್ ಕುನ್ಹಾ ನೇತೃತ್ವದ ಆಯೋಗ ರಚನೆ
ಬೆಂಗಳೂರು, ಆ.26: ಬಿಜೆಪಿ ಸರಕಾರದ ಅವಧಿಯಲ್ಲಿ ಕೋವಿಡ್ ನಿರ್ವಹಣೆ ಹಾಗೂ ತಡೆಗಟ್ಟಲು ಔಷಧ, ಉಪಕರಣಗಳು ಹಾಗೂ ಸಾಮಾಗ್ರಿಗಳ ಖರೀದಿ, ಆಮ್ಲಜನಕ ನಿರ್ವಹಣೆ, ಆಮ್ಲಜನಕ ಕೊರತೆಯಿಂದ ಉಂಟಾದ ಸಾವುಗಳ ಕುರಿತು ತನಿಖೆಗೆ ನಿವೃತ್ತ ನ್ಯಾ. ಜಾನ್ ಮೈಕಲ್ ಕುನ್ಹಾ ಅವರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ನೇಮಿಸಿದ್ದು, 3 ತಿಂಗಳಲ್ಲಿ ವರದಿ ನೀಡಲು ಆದೇಶ ಹೊರಡಿಸಲಾಗಿದೆ.
ಇಂದು ಒಳಾಡಳಿತ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ರಾಜಶೇಖರ್ ಎಂ.ಜಿ. ಅವರು ಅಧಿಸೂಚನೆ ಹೊರಡಿಸಿದ್ದು, 2021ರ ಜುಲೈ-ಆಗಸ್ಟ್ ನಲ್ಲಿ ನಡೆದ ‘ಸಾರ್ವಜನಿಕ ಲೆಕ್ಕಪತ್ರ ಸಮಿತಿ’ ನೀಡಿರುವ ವರದಿಯಲ್ಲಿನ ಗಂಭೀರ ಆರೋಪಗಳ ಕುರಿತು ತನಿಖಾ ಆಯೋಗವನ್ನು ರಚನೆ ಮಾಡಲಾಗಿದೆ . ಈ ಆಯೋಗಕ್ಕೆ ಸಂಬಂಧಪಟ್ಟಂತೆ ಆಯಾ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು ಆಯೋಗವು ಕಾಲಾನುಕಾಲಕ್ಕೆ ತನಿಖೆಗಾಗಿ ಅಪೇಕ್ಷಿಸುವ ಎಲ್ಲ ಕಡತಗಳು/ದಾಖಲಾತಿಗಳು/ಇತ್ಯಾದಿಗಳನ್ನು ಒದಗಿಸತಕ್ಕದ್ದು.
ಸ್ಥಳ ತನಿಖೆ ಸಂದರ್ಭದಲ್ಲಿ ಖುದ್ದು ಹಾಜರಿದ್ದು, ವಿಚಾರಣಾ ಆಯೋಗದೊಂದಿಗೆ ಸಂಪೂರ್ಣವಾಗಿ ಸಹಕರಿಸತಕ್ಕದ್ದು. ವಿಚಾರಣಾ ಆಯೋಗಕ್ಕೆ ಅಗತ್ಯವಿರುವ ಸಿಬ್ಬಂದಿ, ಸಾಮಗ್ರಿಗಳು, ವಾಹನಗಳ ವ್ಯವಸ್ಥೆ ಹಾಗೂ ಕಚೇರಿ ಮತ್ತು ಅಗತ್ಯ ಸಲಕರಣೆ ಗಳನ್ನು ಒದಗಿಸತಕ್ಕದ್ದು. ಆಯೋಗಕ್ಕೆ ಭತ್ಯೆ, ಸೌಲಭ್ಯಗಳನ್ನು ನಿಯಮಾನುಸಾರ ಕಲ್ಪಿಸುವುದು.
ಸದರಿ ವಿಚಾರಣಾ ಆಯೋಗಕ್ಕೆ ಅಗತ್ಯವಿದ್ದಲ್ಲಿ, ಅಧ್ಯಕ್ಷರ ಕೋರಿಕೆಯ ಮೇರೆಗೆ ಗುಣಮಟ್ಟ ಪರೀಕ್ಷೆಗೆ ನೋಂದಾಯಿತ 3ನೆ ಸ್ವತಂತ್ರ ಸಂಸ್ಥೆಯ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ವಹಿಸುವುದು. ಆಯೋಗವು ಬೆಂಗಳೂರು ಕೇಂದ್ರ ಸ್ಥಾನದಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಕಚೇರಿಗೆ ಸ್ಥಳಾವಕಾಶ, ಆಯೋಗದ ನ್ಯಾಯಾಧೀಶರಿಗೆ, ಆಯೋಗದ ಕಾರ್ಯದರ್ಶಿಯವರಿಗೆ ಹಾಗೂ ಅಧಿಕಾರಿ/ಸಿಬ್ಬಂದಿಗಳಿಗೆ ವಾಹನಗಳು, ಪೀಠೋಪಕರಣಗಳು, ದೂರವಾಣಿ ವ್ಯವಸ್ಥೆ, ಇತ್ಯಾದಿ ಸೌಲಭ್ಯಗಳನ್ನು ಒದಗಿಸಲು ಆರೋಗ್ಯ ಇಲಾಖೆ ಆಯುಕ್ತರು ಕ್ರಮ ಕೈಗೊಳ್ಳತಕ್ಕದ್ದು ಎಂದು ನಿರ್ದೇಶನ ನೀಡಲಾಗಿದೆ.