“ಗಿರ್‌ಗಿಟ್” ಚಿತ್ರಕ್ಕೆ ನ್ಯಾಯಾಲಯ ತಡೆಯಾಜ್ಞೆ

ಮಂಗಳೂರು: ಅವಿಭಜಿತ ಜಿಲ್ಲೆಯಲ್ಲಿ ಕಳೆದ ಮೂರು ವಾರಗಳಿಂದ ಯಶಸ್ವಿ ಪ್ರದರ್ಶನಗೊಳ್ಳುತ್ತಿರುವ ಹಾಗೂ ಜನಮೆಚ್ಚಿಗೆ ಗಳಿಸುತ್ತಿರುವ ತುಳು ಹಾಸ್ಯಮಯ ಚಿತ್ರ “ಗಿರ್‌ಗಿಟ್”ಗೆ ಮಂಗಳೂರು ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಚಿತ್ರದಲ್ಲಿ ನ್ಯಾಯಾಲಯದ ದೃಶ್ಯವೊಂದರಲ್ಲಿ ನಟ ಅರವಿಂದ ಬೋಳಾರ್ ವಕೀಲರ ಪಾತ್ರ ನಿರ್ವಹಿಸಿದ್ದು, ಅದರಲ್ಲಿ ಐಪಿಸಿ ಸೆಕ್ಷನ್, ನ್ಯಾಯಧೀಶರನ್ನು ಹಾಗೂ ನ್ಯಾಯಾಲವನ್ನು ಅಣಕಿಸಿರುವ ಬಗ್ಗೆ ಮತ್ತು ವಕೀಲರ ವೃತ್ತಿಯನ್ನು ಹಾಸ್ಯಮಯವಾಗಿ ತೋರಿಸಿದ್ದು, ಇದರ  ವಿರುದ್ಧ ಮಂಗಳೂರು ವಕೀಲರ ಸಂಘವು ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಬಗ್ಗೆ ನ್ಯಾಯಾಲವು ಇಂದು ಪರೀಶಿಲಿಸಿ, ಚಿತ್ರವನ್ನು ತಕ್ಷಣದಿಂದ ಪ್ರಸಾರವನ್ನು ತಡೆಹಿಡಿಯಬೇಕೆಂದು ಮಂಗಳೂರು ಕಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಹರೀಶ ತಡೆಯಾಜ್ಞೆ ನೀಡಿ ಆದೇಶ ನೀಡಿರುತ್ತಾರೆ.

ವಕೀಲರ ಸಂಘದ ಪರ ಹಿರಿಯ ನ್ಯಾಯಾವಾದಿ ಎಂ.ಪಿ.ಶೆಣೈ ವಾದ ಮಂಡಿಸಿದ್ದಾರೆ.
ಈ ಬಗ್ಗೆ ಚಿತ್ರಮಂದಿರವನ್ನು ವಿಚಾರಿಸಿದಾಗ ನಮಗೆ ಈ ವರೆಗೆ ಯಾವುದೇ ತಡೆಯಾಜ್ಞೆ ಬಂದಿಲ್ಲವೆಂದು ತಿಳಿಸಿದ್ದಾರೆ.

ಈ ಆದೇಶದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಎಚ್.ವಿ. ರಾಘವೇಂದ್ರ ಇಂತಹ ಮಾನ ಹಾನಿಕರ ಸನ್ನಿವೇಶಗಳ ಚಿತ್ರೀಕರಣದ ಬಗ್ಗೆ ಮಂಗಳೂರು ವಕೀಲರ ಸಂಘವು ತೀವ್ರ ಹೋರಾಟ ನಡೆಸುವುದಾಗಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಶ್ರೀ ಎಂ.ಪಿ. ಶೆಣೈ, ವಕೀಲರ ಸಂಘದ ಅಧ್ಯಕ್ಷ ಶ್ರೀ ಎನ್. ನರಸಿಂಹ ಹೆಗ್ಡೆ, ಉಪಾಧ್ಯಕ್ಷ ಜಿನೇಂದ್ರ ಕುಮಾರ್, ಜೊತೆ ಕಾರ್ಯದರ್ಶಿ ಶರ್ಮಿಳಾ, ಕೋಶಾಧಿಕಾರಿ ಅರುಣಾ ಬಿ.ಪಿ. ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!