ಕ್ಯಾಮೆರಾಮನ್‌ಗೆ ಕೊರೊನಾ ಸೋಂಕು ದೃಢ: ನಾಲ್ವರು ಸಚಿವರಿಗೆ ಕ್ವಾರಂಟೈನ್

ಬೆಂಗಳೂರು: ಕನ್ನಡ ಸುದ್ದಿವಾಹಿನಿಯೊಂದರ ಕ್ಯಾಮೆರಾಮನ್‌ಗೆ ಕೊರೊನಾ ಸೋಂಕು ಇರುವುದು ದೃಢಪಟ್ಟ ಬಳಿಕ ಅವರ ಸಂಪರ್ಕಕ್ಕೆ ಬಂದಿದ್ದ ನಾಲ್ವರು ಸಚಿವರಿಗೆ 14 ದಿನಗಳ ಕಾಲ ಪ್ರತ್ಯೇಕ ವಾಸಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ.

ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರನ್ನು ಕ್ಯಾಮೆರಾಮನ್‌ ಸಂದರ್ಶನ ನಡೆಸಿದ್ದರು.

ಇವರಲ್ಲಿ ಬೊಮ್ಮಾಯಿ, ಅಶ್ವತ್ಥನಾರಾಯಣ, ಸಿ.ಟಿ. ರವಿ ಅವರ ಗಂಟಲ ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ ಸೋಂಕು ಪತ್ತೆಯಾಗಿಲ್ಲ. ಸುಧಾಕರ್ ಅವರೂ ಸೋಂಕಿತನ ಸಂಪರ್ಕಕ್ಕೆ ಬಂದಿದ್ದು, ಅವರ ಪರೀಕ್ಷಾ ಫಲಿತಾಂಶ ಇನ್ನೂ ಬಂದಿಲ್ಲ. ಈ ಮಾಹಿತಿಯನ್ನು ಬಿಬಿಎಂಪಿ ಆಯುಕ್ತ ಖಚಿತಪಡಿಸಿದ್ದಾರೆ .

‘ಸೋಂಕಿನ ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ. ಸ್ವತಃ ಕ್ವಾರಂಟೈನ್‌ಗೆ ಒಳಗಾಗಿದ್ದೇವೆ’ ಎಂದು ಬಸವರಾಜ ಬೊಮ್ಮಾಯಿ, ಅಶ್ವತ್ಥನಾರಾಯಣ ಟ್ವೀಟ್‌ ಮಾಡಿದ್ದಾರೆ. ‘ಗಂಟಲ ದ್ರವ ಪರೀಕ್ಷೆಯಲ್ಲಿ ಕೋವಿಡ್‌ 19 ರೋಗ ಲಕ್ಷಣ ಕಾಣಿಸಿಕೊಂಡಿಲ್ಲ’ ಎಂದು ಸಿ.ಟಿ.ರವಿ ಟ್ವೀಟ್‌ ಮಾಡಿದ್ದಾರೆ.

ರಾಜ್ಯದಲ್ಲಿ 21 ತಲುಪಿದ ಮೃತರ ಸಂಖ್ಯೆ
ಬೆಂಗಳೂರು: ಕೊರೊನಾ ಸೋಂಕಿತರಾಗಿದ್ದ ತುಮಕೂರಿನ ವೃದ್ಧರೊಬ್ಬರು ಬುಧವಾರ ಮೃತಪಟ್ಟಿದ್ದು, ಇದರೊಂದಿಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 21 ಆಗಿದೆ.

ಹಸಿರು ವಲಯ ಘೋಷಣೆಯಾದ ಬೆನ್ನಲ್ಲೇ ದಾವಣಗೆರೆಯಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಅತ್ಯಧಿಕ ಸೋಂಕಿತರನ್ನು ಹೊಂದಿರುವ ಬೆಂಗಳೂರಿನಲ್ಲಿ ಸತತ ಎರಡು ದಿನಗಳಿಂದ ಹೊಸ ಪ್ರಕರಣ ದಾಖಲಾಗಿಲ್ಲ.


ಗುರುವಾರ ಮತ್ತೆ 22 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಂತೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 557ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Leave a Reply

Your email address will not be published. Required fields are marked *

error: Content is protected !!