ಕೊರೋನಾ ಸೋಂಕಿತ ವ್ಯಕ್ತಿ 30 ದಿನದಲ್ಲಿ 406 ಮಂದಿಗೆ ಸೋಂಕು ತಗುಲಿಸಬಹುದು: ಕೇಂದ್ರ ಸರ್ಕಾರ

ನವದೆಹಲಿ: ಲಾಕ್ ಡೌನ್ ಆದೇಶಗಳು ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇದ್ದರೆ ಓರ್ವ ಕೊರೋನಾ ವೈರಸ್ ಸೋಂಕಿತ ವ್ಯಕ್ತಿ 30 ದಿನಗಳಲ್ಲೇ ಬರೋಬ್ಬರಿ 406 ಮಂದಿಗೆ ಸೋಂಕು ತಗುಲಿಸಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. 

ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಂಕಿ ಅಂಶಗಳನ್ನು ನೀಡಿದ್ದು ಒಂದು ವೇಳೆ ದೇಶದ ಜನತೆ ಲಾಕ್ ಡೌನ್ ಸರಿಯಾಗಿ ಪಾಲಿಸದಿದ್ದರೆ ದೇಶ ದೊಡ್ಡ ಗಂಡಾಂತರಕ್ಕೆ ಸಿಲುಕಲಿದೆ. 

ದೇಶದಲ್ಲಿ ಅದಾಗಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಪರೀಕ್ಷಿಸಾಗಿದ್ದು ಈ ಪೈಕಿ 4,421 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಕಳೆದ 24 ಗಂಟೆಯಲ್ಲಿ ದೇಶದಲ್ಲಿ 354 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 8 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಸಾವಿನ ಸಂಖ್ಯೆ 117ಕ್ಕೇರಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಗರವಾಲ್ ತಿಳಿಸಿದ್ದಾರೆ.

ದೇಶದಲ್ಲಿ 136 ಸರ್ಕಾರಿ ಲ್ಯಾಬ್ ಮತ್ತು 59 ಖಾಸಗಿ ಲ್ಯಾಬ್ ಗಳು ಕೋವಿಡ್ 19 ಪರೀಕ್ಷೆಗಳನ್ನು ನಡೆಸುತ್ತಿದೆ. ಇನ್ನು ಸೋಂಕಿಗೆ ಒಳಗಾಗಿದ್ದ 326 ಮಂದಿ ಗುಣಮುಖರಾಗಿದ್ದು ಅವರನ್ನು ಡಿಸಾರ್ಜ್ ಮಾಡಲಾಗಿದೆ ಎಂದರು.

ದೇಶದಲ್ಲಿ ಏಪ್ರಿಲ್ 14 ರ ನಂತರ ಲಾಕ್ ಡೌನ್ ವಿಸ್ತರಣೆ ಮಾಡುವ ಕುರಿತಂತೆ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಖಚಿತ ಇಲ್ಲದೇ ಇರುವ ಸುದ್ದಿಗಳು ಪ್ರಸಾರವಾಗುತ್ತಿದ್ದು, ಇವುಗಳನ್ನು ಜನತೆ ನಂಬಬಾರರದು. ಯಾವುದೇ ಮಾಧ್ಯಮಗಳು ಊಹಾಪೋಹಗಳನ್ನು ಹರಡಬಾರದು ಎಂದರು. 

ಎನ್ 95 ಮಾಸ್ಕ್ ಗಳು ಸೇರಿದಂತೆ ವೈದ್ಯಕೀಯ ಪರಿಕರಗಳಿಗೆ ಗುಣಮಟ್ಟ ನಿಗದಿಪಡಿಸಿದ್ದು, ಯಾವುದೇ ದೇಶ, ಯಾವುದೇ ಭಾಗದಿಂದ ಇವುಗಳನ್ನು ಖರೀದಿ ಅಥವಾ ಆಮದು ಮಾಡಿಕೊಂಡರೂ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುವುದು ಎಂದರು.

Leave a Reply

Your email address will not be published. Required fields are marked *

error: Content is protected !!