ಮಣಿಪಾಲದಲ್ಲಿ ಕೊರೋನಾ ಸೋಂಕಿತನ ಸುತ್ತಾಟ: ಜನರಲ್ಲಿ ಹೆಚ್ಚಿದ ಆತಂಕ!
ಉಡುಪಿ: ಜಿಲ್ಲೆಯಲ್ಲಿ ಮೊದಲ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗುತ್ತಿದ್ದಂತೆ ಜಿಲ್ಲಾಡಳಿತ ಸೋಂಕಿತನ ಸಂಪರ್ಕದಲ್ಲಿದ್ದವರ ಮಾಹಿತಿ ಕಲೆಹಾಕಲು ಹರಸಾಹಸ ಪಡುತ್ತಿದೆ. ಸೋಂಕಿತ ವ್ಯಕ್ತಿ ಮಣಿಪಾಲದ ಕೆಎಂಸಿ ನೌಕರನಾಗಿದ್ದು, ದುಬೈನಿಂದ ಬಂದ ದಿನವೇ ರಜೆ ಕೊಟ್ಟು ಮನೆಗೆ ಕಳುಹಿಸಲಾಗಿತ್ತು. ಪತ್ನಿ ಹಾಗೂ ಮಗು ತವರು ಮನೆಗೆ ಹೋಗಿದ್ದರಿಂದ ಒಬ್ಬನೇ ಮನೆಯಲ್ಲಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಸೋಂಕಿತ ವ್ಯಕ್ತಿ ದುಬೈನಿಂದ ಮಂಗಳೂರಿಗೆ ಬಂದಿಳಿದ ಬಳಿಕ ಅಲ್ಲಿಂದ ಟ್ಯಾಕ್ಸಿಯಲ್ಲಿ ಉಡುಪಿಗೆ ಬಂದಿದ್ದು, ಕಾರು ಚಾಲಕನನ್ನು ಪತ್ತೆಹಚ್ಚಿ ಗೃಹಬಂಧನದಲ್ಲಿಡಲಾಗಿದೆ. ಸೋಂಕಿತ ನಾಲ್ವರ ಜತೆ ಸಂಪರ್ಕ ಹೊಂದಿದ್ದು, ಅವರ ಮಾಹಿತಿಯನ್ನೂ ಪಡೆದು ಎಚ್ಚರ ವಹಿಸಲಾಗಿದೆ.
ಮಣಿಪಾಲದ ಸಾರ್ವಜನಿಕರಲ್ಲಿ ಆತಂಕ
ಸೋಂಕಿತ ಮಣಿಪಾಲದ ಆಸುಪಾಸಿನಲ್ಲಿ, ಆಸ್ಪತ್ರೆಯ ಮುಖ್ಯಸ್ಥರನ್ನು, ತಾನು ಕೆಲಸ ನಿರ್ವಹಿಸುತ್ತಿದ್ದ ಸ್ಥಳ ಸಹಿತ ಹಲವಾರು ಕಡೆ ಸುತ್ತಾಡಿದ್ದಾನೆಂದು ಸಿಬ್ಬಂದಿಗಳು ತಿಳಿಸಿದ್ದಾರೆ. ನಿನ್ನೆ ಸಾಮಾಜಿಕ ಮಾಧ್ಯಮದಲ್ಲಿ ಸೋಂಕಿತ ಚಿತ್ರ ವೈರಲ್ ಆಗುತ್ತಿದಂತೆ, ಆತ ಮಣಿಪಾಲದಲ್ಲಿ ಸುತ್ತಾಡಿರುವುದು ಖಚಿತ ಪಡಿಸಿದ್ದಾರೆ. ಯಾರನ್ನೆಲ್ಲ ಭೇಟಿಯಾಗಿದ್ದಾನೆ, ಮನೆಗೆ ಯಾರೆಲ್ಲ ಬಂದಿದ್ದರು ಎಂಬ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ. ಸೋಂಕಿತನ ಮೊಬೈಲ್ ಕರೆಗಳ ಮಾಹಿತಿ ಪಡೆದು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಜಿಲ್ಲೆಯಲ್ಲಿ ಮೊದಲ ಕೋವಿಡ್ ಸೋಂಕು ಪತ್ತೆಯಾಗುತ್ತಿದ್ದಂತೆ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ಮನೆಯಿಂದ ಹೊರಬರಲೂ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.