ಕೊರೊನಾ ವೈರಸ್‌ ಭೀತಿ: ಕೋಳಿ ಮಾಂಸ ಮಾರಾಟ ಭಾರಿ ಕುಸಿತ

ಬೆಂಗಳೂರು: ಕೊರೊನಾ ವೈರಸ್‌ ಭೀತಿಯಿಂದಾಗಿ ಕರ್ನಾಟಕದ ಕುಕ್ಕುಟೋದ್ಯಮ ನಷ್ಟ ಅನುಭವಿಸುತ್ತಿದೆ ಎಂದು ರಾಜ್ಯ ಕುಕ್ಕುಟೋದ್ಯಮ ಸಹಕಾರ ಒಕ್ಕೂಟದ ಅಧ್ಯಕ್ಷ ಕಾಂತರಾಜು ತಿಳಿಸಿದ್ದಾರೆ. 

ಈ ಕುರಿತು ಗುರುವಾರ ಮಾತನಾಡಿರುವ ಕಾಂತರಾಜು ’ಕರ್ನಾಟಕದ ಕುಕ್ಕುಟೋದ್ಯಮ ಭಾರಿ ಪ್ರಮಾಣದಲ್ಲಿ ಕುಸಿದಿದೆ. ನಿತ್ಯವೂ ನಷ್ಟ ಸಂಭವಿಸುತ್ತಿದೆ. ಅದರ ಪ್ರಮಾಣ 60 ರಿಂದ 65 ಕೋಟಿ ರೂಪಾಯಿಗಳಾಗಿವೆ. ಕೋಳಿ ಮಾಂಸದ ಬೇಡಿಕೆಯೂ ಶೇ. 30 ರಿಂದ 35 ರಷ್ಟು ಕುಸಿತ ಕಂಡಿದೆ,’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.  

ಚೀನಾದ ವುಹಾನ್‌ ನಗರವನ್ನು ಅಲುಗಾಡುತ್ತಿರುವ ಕೊರೊನಾ ವೈರಸ್‌ ಕೋಳಿಗಳಿಗೂ ತಗುಲಿದೆ ಎಂಬ ಆತಂಕ ಜನರಲ್ಲಿ ಆವರಿಸಿದೆ. ಅದರ ಸೇವನೆಯಿಂದ ಕೊರೊನಾ ವೈರಸ್‌ ಸೋಂಕು ಮನುಷ್ಯರಿಗೂ ಬರುವ ಸಾಧ್ಯತೆಗಳಿವೆ ಎಂಬ ಸಂದೇಶಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಇದು ಕುಕ್ಕುಟೋದ್ಯಮವನ್ನು ಬಾಧಿಸುತ್ತಿದೆ. 

ಕೋಳಿ ಮಾಂಸದಲ್ಲಿ ‘ಕೋವಿಡ್-19’ (ಕೊರೊನಾ) ಸೋಂಕು ಇದೆ ಎಂಬ ವದಂತಿ ಸತ್ಯಕ್ಕೆ ದೂರವಾಗಿದ್ದು, ಇದಕ್ಕೆ ಯಾರು ಕಿವಿಗೊಡಬಾರದು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ. 

ಚೀನಾ ದೇಶದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್ ಸೋಂಕು ಕೋಳಿಗಳಿಂದ ಹರಡುತ್ತದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಈ ವದಂತಿಗೆ ಯಾವುದೇ ವೈಜ್ಞಾನಿಕ ಆಧಾರ ಇರುವುದಿಲ್ಲ. ದೇಶದಲ್ಲಿ ಕೋಳಿಗಳಿಗೆ ಕೋವಿಡ್ ಸೋಂಕು ಕಾಣಿಸಿಕೊಂಡ ಬಗ್ಗೆ ಇದು ವರೆಗೂ ಯಾವುದೇ ವರದಿಯಾಗಿಲ್ಲ. ಈ ಸೋಂಕು ಹರಡುವಿಕೆಯಲ್ಲಿ ಕೋಳಿಗಳ ಪಾತ್ರವಿಲ್ಲ. ಸಾಮಾನ್ಯವಾಗಿ ಕೋಳಿ ಮಾಂಸವನ್ನು 100 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿ ಬೇಯಿಸಲಾಗುತ್ತದೆ. ಈ ಉಷ್ಣತೆಯಲ್ಲಿ ಯಾವುದೇ ವೈರಾಣುಗಳು ಬದುಕುಳಿಯಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. 

ಈ ರೀತಿಯ ವದಂತಿಗಳನ್ನು ಹರಡುವುದರಿಂದ ಉತ್ತಮ ಪೌಷ್ಟಿಕಾಂಶ ನೀಡುವ ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆಯ ಮೇಲೆ ಗಣನೀಯ ದುಷ್ಪರಿಣಾಮ ಬೀರುತ್ತದೆ. ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು, ಬಾಣಂತಿಯರು ಪೋಷಕಾಂಶ ಕೊರತೆಯಿಂದ ನರಳುತ್ತಿದ್ದಾರೆ. ಈ ಸಂದರ್ಭದಲ್ಲಿ ಇಂತಹ ವದಂತಿಗಳು ಸಾಮಾಜಿಕ ಸ್ವಾಸ್ಥ್ಯವನ್ನು ಮತ್ತಷ್ಟು ಹದಗೆಡಿಸುತ್ತವೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. 

ಕೋವಿಡ್ ವೈರಸ್‌ಗೆ ಹೋಮಿಯೋಪಥಿ ಔಷಧಿ, ಶಂಕಿತರಿಗೆ ಚಿಕಿತ್ಸೆ ಒದಗಿಸಲು ಬೆಂಗಳೂರಿನ  ಯಲಹಂಕದಲ್ಲಿ ಶಿಬಿರ ಸೇರಿದಂತೆ ಹಲವು ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ, ಇವೆಲ್ಲ ಸತ್ಯಕ್ಕೆ ದೂರವಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ. 



Leave a Reply

Your email address will not be published. Required fields are marked *

error: Content is protected !!