ಕಾಸರಗೋಡಿನಲ್ಲಿ ಕೊರೋನಾ ವೈರಸ್ ಪತ್ತೆ, ಹೆಚ್ಚಿದ ಭೀತಿ
ತಿರುವನಂತಪುರ: ಚೀನಾದಲ್ಲಿ ಕೊರೋನಾ ವೈರಸ್ ಮರಣಮೃದಂಗ ಮುಂದುವರೆಯುತ್ತಿರುವ ನಡುವಲ್ಲೇ ಭಾರತದಲ್ಲೂ 3ನೇ ಕೊರೋನಾ ವೈರಸ್ ರೋಗ ಪ್ರಕರಣ ದೃಢಪಟ್ಟಿದೆ.
ಮೊದಲೆರಡು ಪ್ರಕರಣ ದಾಖಲಾಗಿದ್ದ ಕೇರಳದಲ್ಲಿಯೇ ಇದೀಗ ಮೂರನೇ ಪ್ರಕರಣ ಕೂಡ ನಡೆದಿದೆ ಎಂದು ವರದಿಗಳು ತಿಳಿಸಿವೆ. ಈ ಕುರಿತಂತ ಕೇರಳ ರಾಜ್ಯ ಆರೋಗ್ಯ ಸಚಿವೆ ಕೆಕೆ. ಶೈಲಜಾ ಅವರು ಮಾಹಿತಿ ನೀಡಿದ್ದು, ಕಾಸರಗೋಡಿನಲ್ಲಿ ಮೂರನೇ ಕೊರೋನಾ ವೈರಸ್ ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಕೊರೋನಾ ವೈರಸ್ ನ ಮೂಲ ಕೇಂದ್ರವಾಗಿರುವ ಚೀನಾದಿಂದ ಆಗಮಿಸಿದ್ದ ವಿದ್ಯಾರ್ಥಿಯೊಬ್ಬನಿಗೆ ಕೊರೋನಾ ವೈರಾಣು ಸೋಂಕು ತಗುಲಿರುವುದು ದೃಢಪಟ್ಟಿದೆ. ವೈರಸ್ ತಗುಲಿರುವ ವ್ಯಕ್ತಿ ಇದೀಗ ಕನ್ಹನ್ಗಡ್ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಿಶೇ, ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಸೋಂಕು ತಗುಲಿಸುವ ಯುವಕ ಕೂಡ ಚೀನಾದ ವುಹಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯೆಂದು ಹೇಳಲಾಗುತ್ತಿದೆ.
ಪ್ರಸ್ತುತ ವ್ಯಕ್ತಿಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಯಾರೊಬ್ಬರೂ ಭೀತಿಗೊಳಗಾಗುವ ಅಗತ್ಯವಿಲ್ಲ ಎಂದು ಸಚಿವೆ ತಿಳಿಸಿದ್ದಾರೆ.
ಸೋಂಕಿಗೊಳಗಾಗಿರುವ ಮತ್ತಿಬ್ಬರು ವ್ಯಕ್ತಿಗಳಿಗೂ ತ್ರಿಸೂರು ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಅಲಪ್ಪುಝಾ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ತೀವ್ರ ಉಸಿರಾಟದ ತೊಂದರೆಯನ್ನು ಉಂಟುಮಾಡುವ ಕಾಯಿಲೆಯೇ ಈ ಕೊರೊನಾ ವೈರಸ್. ಇದು ಮುಂದುವರಿಯುತ್ತಾ ಹೋದರೆ ನ್ಯೂಮೋನಿಯಾ ಮತ್ತು ಇತರ ಉಸಿರಾಟ ಸಂಬಂಧಿ ತೊಂದರೆ ಕಾಣಿಸುತ್ತದೆ. ಇದು ಮೊದಲು ಕಾಣಿಸಿಕೊಂಡಿದ್ದು ಚೀನಾ ಕೇಂದ್ರ ಭಾಗದ ವುಹನ್ ಎಂಬಲ್ಲಿಯಾದ್ದರಿಂದ ಇದನ್ನು ವುಹನ್ ವೈರಸ್ ಎಂತಲೂ ಕರೆಯುತ್ತಾರೆ.
ನಾಯಿ ಮತ್ತು ಬೆಕ್ಕುಗಳಲ್ಲಿ ಈ ಕೊರೊನಾ ವೈರಸ್ ಸಾಮಾನ್ಯ, ಇತರ ಪ್ರಾಣಿಗಳಲ್ಲಿ ಕೂಡ ಕಾಣಿಸತ್ತದೆ. ಹುವಾನಾನ್ ಸಮುದ್ರಾಹಾರ ಮಾರುಕಟ್ಟೆಯಲ್ಲಿ ಈ ವೈರಸ್ ಮೊದಲು ಕಾಣಿಸಿಕೊಂಡಿದೆಯಂತೆ. ಇಲ್ಲಿ ಸಮುದ್ರ ಪ್ರಾಣಿಗಳನ್ನು ಜೀವಂತವಾಗಿ ಮಾರಾಟ ಮಾಡಲಾಗುತ್ತದೆ. ಆದರೂ ಆರೋಗ್ಯಾಧಿಕಾರಿಗಳು ಕೊರೊನಾ ವೈರಸ್ ಸೋಂಕು ಹರಡಲು ನಿಖರ ಕಾರಣವೇನೆಂದು ಇನ್ನೂ ದೃಢಪಡಿಸಿಲ್ಲ. ಹೊಸ ವರ್ಷದಿಂದ ಈ ಮಾರುಕಟ್ಟೆ ಮುಚ್ಚಲ್ಪಟ್ಟಿದೆ.
ಮನುಷ್ಯನಿಂದ ಮನುಷ್ಯನಿಗೆ ಹರಡುವ ಸೋಂಕು ಇದು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಕೆಮ್ಮು, ಸೀನು ಅಥವಾ ಒಬ್ಬರಿಗೊಬ್ಬರು ಕೈ ಕುಲುಕುವಿಕೆಯಿಂದ ಕೂಡ ವೈರಸ್ ಹರಡಬಹುದು