ಹಾಸನಕ್ಕೂ ಒಕ್ಕರಿಸಿದ ಕೊರೋನಾ: ಇಂದು 14 ಪ್ರಕರಣ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆ!

ಬೆಂಗಳೂರು: ಗ್ರೀನ್ ಜೋನ್ ಹಾಸನಕ್ಕೂ ಕೊರೋನಾ ಮಹಾಮಾರಿ ಒಕ್ಕರಿಸಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆಯಾಗಿದೆ. 

ಇಂದು ಹೊಸದಾಗಿ 14 ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆ ಆಗಿದೆ. ಈ ಪೈಕಿ 31 ರೋಗಿಗಳು ಮೃತಪಟ್ಟಿದ್ದು, 426 ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ದಾವಣಗೆರೆಯಲ್ಲಿ 3, ಕಲಬುರ್ಗಿಯಲ್ಲಿ 1, ಬೀದರ್ ನಲ್ಲಿ 2, ಬೆಂಗಳೂರಿನಲ್ಲಿ 2, ಮಂಡ್ಯ, ಹಾಸನ, ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ 1, ಬಾಗಲಕೋಟೆ ಜಿಲ್ಲೆಯ ಬನಹಟ್ಟಿ, ಬದಾಮಿಯಲ್ಲಿ ತಲಾ 1 ಹಾಗೂ ವಿಜಯಪುರದಲ್ಲಿ 1 ಪ್ರಕರಣಗಳು ಪತ್ತೆಯಾಗಿವೆ. 

849ನೇ ಸಂಖ್ಯೆಯ ರೋಗಿ ಕಲಬುರಗಿಯ 38 ವರ್ಷದ ಪುರುಷನಾಗಿದ್ದು, 850, 851 ಹಾಗೂ 852ನೇ ಸಂಖ್ಯೆಯ ರೋಗಿಗಳು ದಾವಣಗೆರೆಯವರಾಗಿದ್ದಾರೆ. 853ನೇ ಸೋಂಕಿತ ಹಾವೇರಿ ಜಿಲ್ಲೆ ಶಿಗ್ಗಾವಿಯ 26 ವರ್ಷದ ಯುವಕ, 854ನೇ ರೋಗಿ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ 20 ವರ್ಷದ ಯುವಕ ಹಾಗೂ  855ನೇ ರೋಗಿ ಬದಾಮಿಯ  28 ವರ್ಷದ ಯುವಕನಾಗಿದ್ದಾರೆ.856ನೇ ಸೋಂಕಿತೆ ವಿಜಯಪುರದ 20 ವರ್ಷದ ಯುವತಿ, 857 ಹಾಗೂ 858ನೇ ರೋಗಿಗಳು  ಬೀದರ್ ನ ಪುರುಷರಾಗಿದ್ದಾರೆ.

ಕಲಬುರಗಿಯ 38 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಈತನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ದಾವಣಗೆರೆಯಲ್ಲಿ ಸೋಂಕಿತರ ಸಂಪರ್ಕ ಹೊಂದಿದೆ 33 ವರ್ಷದ ವ್ಯಕ್ತಿ, 30 ಮತ್ತು 50 ವರ್ಷದ ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದೆ. 

ಹಾವೇರಿಯ ಶಿಗ್ಗಾವಿಯಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿರುವ ಹಿನ್ನೆಲೆ ಹೊಂದಿರುವ 26 ವರ್ಷದ ಯುವಕ, ಬಾಗಲಕೋಟೆಯ ಬನಹಟ್ಟಿಯಲ್ಲಿ ಗುಜರಾತ್ ನ ಅಹಮದಾಬಾದ್ ಗೆ ಪ್ರಯಾಣ ಮಾಡಿರುವ ಹಿನ್ನೆಲೆಯುಳ್ಳ 20 ವರ್ಷದ ಯುವಕರಲ್ಲಿ ಸೋಂಕು ಕಾಣಿಸಿಕೊಂಡಿದೆ. 

ಸೋಂಕಿತ ಗರ್ಭಿಣಿ ಮಹಿಳೆ (688 ರೋಗಿ) ಸಂಪರ್ಕ ಹೊಂದಿದ 50 ವರ್ಷದ ವ್ಯಕ್ತಿ, ಬೀದರ್ ನ 50 ಮತ್ತು 27 ವರ್ಷದ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

859 ರೋಗಿ 55 ವರ್ಷದ ಮಹಿಳೆಯಾಗಿದ್ದಾರೆ. 860ನೇ ರೋಗಿ 26 ವರ್ಷದ ಪುರುಷನಾಗಿದ್ದು 796 ರೋಗಿಯ ಸಂಪರ್ಕದಿಂದ ಈ ಇಬ್ಬರಿಗೂ ಸೋಂಕು ಹರಡಿದೆ. 861ನೇ ರೋಗಿ ಹಾಸನದವರಾಗಿದ್ದು ಮುಂಬೈನಿಂದ ಆಗಮಿಸಿದ್ದರು. 862ನೇ ರೋಗಿ ಸಹ ಮುಂಬೈನಿಂದ ಮಂಡ್ಯಕ್ಕೆ ಆಗಮಿಸಿದ್ದರು.

Leave a Reply

Your email address will not be published. Required fields are marked *

error: Content is protected !!