ಗ್ರೀನ್ ಜೋನ್ ಶಿವಮೊಗ್ಗಕ್ಕೂ ವಕ್ಕರಿಸಿದ ಕೊರೋನಾ: 8 ಮಂದಿಗೆ ಸೋಂಕು!,ಭಟ್ಕಳದಲ್ಲಿ 28ಕ್ಕೇರಿದೆ
ಶಿವಮೊಗ್ಗ: ಜಿಲ್ಲೆಗೆ ಮೂರು ದಿನಗಳಲ್ಲಿ 289 ಜನರು ಹೊರ ರಾಜ್ಯಗಳಿಂದ ಬಂದಿದ್ದರು. ಅವರಲ್ಲಿ 8 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಪೈಕಿ 7 ಮಂದಿ ಶಿಕಾರಿಪುರ ಮತ್ತು ಒಬ್ಬರು ತೀರ್ಥಹಳ್ಳಿಯವರು. ಎಲ್ಲರನ್ನೂ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ಕೇಂದ್ರದ ಪ್ರತ್ಯೇಕ ವಾರ್ಡ್‌ನಲ್ಲಿ ಇಡಲಾಗಿದೆ. ಶಿವಮೊಗ್ಗದ ಯಾರಿಗೂ ಪಾಸಿಟಿವ್ ಇರಲಿಲ್ಲ, ಗುಜರಾತ್‌ನಿಂದ ಅನುಮತಿ ಪಡೆದು ಬಂದವರಲ್ಲಿ ಮಾತ್ರ ಇದೆ. ಹಾಗಾಗಿ ಗ್ರೀನ್ ಜೋನ್‌ಗೆ ಧಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಭಟ್ಕಳ: ಮತ್ತೆ ಏಳು ಮಂದಿಗೆ ಕೋವಿಡ್ 19 ದೃಢ
ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ಮತ್ತೆ ಏಳು ಮಂದಿಗೆ ಕೋವಿಡ್ 19 ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 28ಕ್ಕೇರಿದೆ. ಹೊಸದಾಗಿ ದೃಢಪಟ್ಟಿರುವವರ ಪೈಕಿ ಇಬ್ಬರು ಮಹಿಳೆಯರಿದ್ದಾರೆ. 15 ಮತ್ತು 16 ವರ್ಷದ ಇಬ್ಬರು ಬಾಲಕರಿಗೂ ಸೋಂಕು ತಗುಲಿದೆ. ಭಾನುವಾರ ಸೋಂಕು ಖಚಿತವಾದ ಎಲ್ಲರೂ 18 ವರ್ಷದ ಯುವತಿಯ (ರೋಗಿ ಸಂಖ್ಯೆ 659) ಸಂಪರ್ಕಕ್ಕೆ ಬಂದವರೇ ಆಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಒಟ್ಟು 39 ಜನರಿಗೆ ಸೋಂಕು ತಗುಲಿದ್ದು, 11 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. ಕಳೆದ ಮೂರು ದಿನಗಳ ಅವಧಿಯಲ್ಲಿ 27 ಜನರಿಗೆ ಕೋವಿಡ್ 19 ಖಚಿತವಾಗಿವೆ. ಎಲ್ಲ ಪ್ರಕರಣಗಳೂ ಕಂಟೈನ್‌ಮೆಂಟ್ ವಲಯವಾಗಿರುವ ಭಟ್ಕಳದಲ್ಲೇ ವರದಿಯಾಗಿವೆ. ಎಲ್ಲರಿಗೂ ಕಾರವಾರದ ವೈದ್ಯಕೀಯ ಕಾಲೇಜಿನ ಕೊರೊನಾ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಭಟ್ಕಳದಲ್ಲಿ ಲಾಕ್‌ಡೌನ್‌ನ ಎಲ್ಲ ಸಡಿಲಿಕೆಗಳನ್ನು ಈಗಾಗಲೇ ಹಿಂಪಡೆಯಲಾಗಿದ್ದು, ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿದೆ. ಮದೀನಾ ಕಾಲೊನಿ ಸೇರಿದಂತೆ ಬಹುತೇಕ ಬಡಾವಣೆಗಳ ರಸ್ತೆಗಳನ್ನು ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಲಾಗಿದೆ. ಮೆಡಿಕಲ್ ಸೇರಿದಂತೆ ಎಲ್ಲ ಅಂಗಡಿ, ಮಳಿಗೆಗಳನ್ನೂ ಮುಚ್ಚಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಭಾನುವಾರ ಮತ್ತೊಂದು ಪ್ರಕರಣ ದೃಢಪಟ್ಟಿದೆ. ರಾಜಸ್ತಾನದ ಅಜಮೀರ್‌ಗೆ ಹೋಗಿ ಬಂದಿದ್ದ 22 ವರ್ಷದ ಯುವಕನಲ್ಲಿ (ಪಿ. 847) ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ.