ಕೊರೋನಾ: ಕರ್ನಾಟಕ 124, ದೆಹಲಿ 293, ತೆಲಂಗಾಣ 154: ಭಾರತದಲ್ಲಿ 2069ಕ್ಕೇರಿದ ಸೋಂಕಿತರ ಸಂಖ್ಯೆ
ನವದೆಹಲಿ: ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿ ಧಾರ್ಮಿಕ ಸಭೆ ಬಳಿಕ ದೇಶದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದ್ದು, ದೇಶದಲ್ಲಿ ವೈರಸ್ ಸೋಂಕಿತರ ಸಂಖ್ಯೆ 2069ಕ್ಕೆ ಏರಿಕೆಯಾಗಿದೆ.
ನಿಜಾಮುದ್ದೀನ್ ಮರ್ಕಜ್ ಮಸೀದಿ ಧಾರ್ಮಿಕ ಸಭೆ ಬಳಿಕ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 293ಕ್ಕೆ ಏರಿಕೆಯಾಗಿದ್ದು, ಇದೇ ಕಾರ್ಯಕ್ರಮದ ಎಫೆಕ್ಟ್ ನೆರೆಯ ತೆಲಂಗಾಣ ರಾಜ್ಯದ ಮೇಲೂ ಆಗಿದೆ. ತೆಲಂಗಾಣದಲ್ಲಿ ಈ ವರೆಗೂ 154 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಬಹುತೇಕರು ಈ ನಿಜಾಮುದ್ದೀನ್ ಮರ್ಕಜ್ ಮಸೀದಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಾಗಿದ್ದಾರೆ.
ಇನ್ನು ಈ ಹಿಂದೆ ವೈರಸ್ ಸೋಂಕಿಗೆ ತುತ್ತಾಗಿದ್ದ ಏಮ್ಸ್ ಆಸ್ಪತ್ರೆಯ ವೈದ್ಯ ಚಿಕಿತ್ಸೆ ಪಡೆಯುತ್ತಿರುವಂತೆಯೇ ಅವರ 9 ತಿಂಗಳ ತುಂಬು ಗರ್ಭಿಣಿ ಪತ್ನಿಗೂ ವೈರಸ್ ಸೋಂಕು ತಗುಲಿದ್ದು. ಪ್ರತ್ಯೇಕಿತ ವಾರ್ಡ್ ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಉತ್ತರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 121ಕ್ಕೆ ಏರಿಕೆಯಾಗಿದ್ದು, ಪಶ್ಚಿಮ ಬಂಗಾಳದಲ್ಲಿ 53, ಬಿಹಾರದಲ್ಲಿ 29ಕ್ಕೆ ಏರಿಕೆಯಾಗಿದೆ.
ಇನ್ನು ಕರ್ನಾಟಕದಲ್ಲಿ ಇಂದು ಮತ್ತೆ 14 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 124ಕ್ಕೆ ಏರಿಕೆಯಾಗಿದೆ.