ದೇಶದಲ್ಲಿ 19 ಮಂದಿ ಬಲಿ,149 ಹೊಸ ಪ್ರಕರಣ, 850ಕ್ಕೇರಿದ ಸೋಂಕಿತ ಸಂಖ್ಯೆ
ನವದೆಹಲಿ: ಕೊರೋನಾ ನಿಗ್ರಹಕ್ಕೆ ಕೇಂದ್ರ ಸರ್ಕಾರ ದೇಶವ್ಯಾಪಿ 21 ದಿನಗಳ ಲಾಕ್ ಡೌನ್ ಘೋಷಿಸಿರುವ ನಡುವೆಯೇ ಶುಕ್ರವಾರ ಒಂದೇ ದಿನ 149ಕ್ಕೂ ಹೆಚ್ಚು ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ವರೆಗೂ ವೈರಸ್’ಗೆ 19 ಮಂದಿ ಬಲಿಯಾಗಿದ್ದಾರೆ.
ದೇಶದಲ್ಲಿ ಕೊರೋನಾ ಪತ್ತೆಯಾದ ಬಳಿಕ ಒಂದೇ ದಿನ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿದ್ದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 850ಕ್ಕೆ ಏರಿಕೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಈ ನಡುವೆ ಕರ್ನಾಟಕದ ತುಮಕೂರಿನಲ್ಲಿ ಓರ್ವನ ಸಾವಿನೊಂದಿಗೆ ದೇಶದಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ 19ಕ್ಕೆ ತಲುಪಿದೆ.
ಶುಕ್ರವಾರ ಕೇರಳ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಹೊಸ ಸೋಂಕು ಪತ್ತೆಯಾಗಿದೆ.
ಈ ನಡುವೆ ದೇಶದಲ್ಲಿ ಇನ್ನೂ ಸಾಮುದಾಯಿಕ ಸೋಂಕು ಹರಡುವಿಕೆಯ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ನಡುವೆ ಆಘಾತಕಾರಿ ಬೆಳವಣಿಗೆಯೆಂಬಂತೆ ಬ್ರಿಟೀಷ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಅವರಲ್ಲೂ ಕೊರೋನಾ ವೈರಸ್ ದೃಢಪಟ್ಟಿದ್ದು, ವೈರಸ್ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ಪ್ರತ್ಯೇಕ ಕೊಠಡಿಯಲ್ಲಿರುವುದಾಗಿ ಜಾನ್ಸನ್ ಅವರೇ ಹೇಳಿಕೊಂಡಿದ್ದಾರೆ.