ಕೊರೋನಾ: ತಮಿಳುನಾಡಿನಲ್ಲಿ ಮೊದಲ ಸಾವು, ಭಾರತದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ
ತಮಿಳುನಾಡು: ರಾಜ್ಯದಲ್ಲಿ ಮೊದಲ ಕೊರೋನಾ ಸೋಂಕು ಸಾವು ವರದಿಯಾಗಿದೆ. ಇಂದು ಬೆಳಗ್ಗೆ ಮಧುರೈಯ ಅಣ್ಣಾ ನಗರದಲ್ಲಿ 54 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇದು ಮೊದಲ ಕೊರೋನಾ ವೈರಸ್ ಸಾವು ಪ್ರಕರಣವಾಗಿದೆ.
ತಮಿಳು ನಾಡು ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ಅವರು ಕೊರೋನಾ ರೋಗಿಯ ಸಾವನ್ನು ದೃಢಪಡಿಸಿದ್ದಾರೆ. ಮಧುರೈಯ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ರೋಗಿ ಮೃತಪಟ್ಟಿದ್ದಾರೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಈ ವ್ಯಕ್ತಿಯಲ್ಲಿ ಸುದೀರ್ಘ ಕಾಲದಿಂದ ಕಾಯಿಲೆಯಿತ್ತು ಎಂದು ವೈದ್ಯಕೀಯ ವರದಿ ಹೇಳುತ್ತದೆ.
ಭಾರತದಲ್ಲಿ ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ 562ಕ್ಕೇರಿದೆ. ಇದುವರೆಗೆ 53 ಕೊರೋನಾ ವೈರಸ್ ಪೀಡಿತರು ಗುಣಮುಖರಾಗಿದ್ದಾರೆ.