ಕೊರೋನಾ ವೈರಸ್‌ ಪತ್ತೆ: ದ.ಕ. ಸೇರಿದಂತೆ ರಾಜ್ಯದ ಹಲವೆಡೆ ಹೈ ಅಲರ್ಟ್

ಮಂಗಳೂರು: ಕಾಸರಗೋಡಿನಲ್ಲಿ ಕೊರೋನಾ ವೈರಸ್‌ ಪತ್ತೆಯಾದ ಹಿನ್ನಲೆಯಲ್ಲಿ ರಾಜ್ಯದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ ಮತ್ತು ಮೈಸೂರು ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.ಸೋಂಕು ಶಂಕಿತರ ಚಲನ ವಲನಗಳ ಮೇಲೆ ನಿಗಾ ವಹಿಸುವಂತೆ ರಾಜ್ಯ ಸರ್ಕಾರ ಸೋಮವಾರ ಆದೇಶಿಸಿದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಪ್ರಕಟಣೆ ಹೊರಡಿಸಿದೆ.

ಗಡಿ ಜಿಲ್ಲೆಗಳಲ್ಲಿ ಯಾವುದಾದರು ಶಂಕಿತ ಪ್ರಕರಣಗಳು ಕಂಡುಬಂದರೆ ತಕ್ಷಣ ರಾಜ್ಯ ವಿಚಕ್ಷಣ ಘಟಕಕ್ಕೆ ವರದಿ ನೀಡಬೇಕು ಎಂದು ತಿಳಿಸಲಾಗಿದೆ.ಕೊರೋನಾ ವೈರಸ್‌ ಸೋಂಕಿತ ಶಂಕಿತ ವ್ಯಕ್ತಿಗಳ ರಕ್ತ ಪರೀಕ್ಷೆಯನ್ನು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ನಿಮ್ಹಾನ್ಸ್‌ ಬಳಿಯಿರುವ ಎನ್‌ಐವಿ ವೈದ್ಯಕೀಯ ಪ್ರಯೋಗಾಲಯದಲ್ಲಿ ನೀಡಬೇಕು . ಪುಣೆಯ ರಾಷ್ಟ್ರೀಯ ರೋಗ ಸೂಕ್ಷ್ಮಾಣು ಅಧ್ಯಯನ ಸಂಸ್ಥೆಯಿಂದ ಪರೀಕ್ಷಾ ವರದಿ ಬರುವುದು ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ನಗರದಲ್ಲಿಯೇ ಪ್ರಯೋಗಾಲಯ ಪ್ರಾರಂಭಿಸಲಾಗಿದ್ದು ವರದಿಗಳು ಶೀಘ್ರವಾಗಿ ಶಂಕಿತರ ಕೈ ಸೇರಲಿದೆ.

ಜ.21ರಿಂದ ಈವರೆಗೆ 84 ಶಂಕಿತರ ರಕ್ತದ ಮಾದರಿಯನ್ನು ಎನ್‌ಐವಿಗೆ ಕಳುಹಿಸಲಾಗಿತ್ತು. ಆ ಪೈಕಿ 28 ಮಂದಿಗೆ ಸೋಂಕು ತಗುಲಿಲ್ಲ ಎನ್ನುವುದು ದೃಢಪಟ್ಟಿದೆ. ಶನಿವಾರ ಮತ್ತು ಭಾನುವಾರ 43 ಶಂಕಿತರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.ಚೀನಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಲ್ಲಿಂದ ಬಂದವರು ಕೆಲವೊಂದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಮನೆಯಲ್ಲಿ 14 ದಿನಗಳು ಪ್ರತ್ಯೇಕವಾಗಿ ಮಲಗಬೇಕು. ಸೀನುವಾಗ ಮತ್ತು ಕೆಮ್ಮುವಾಗ ಮೂಗು ಹಾಗೂ ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು. ಕುಟುಂಬದ ಸದಸ್ಯರು ಹಾಗೂ ಹೊರಗಿನವರೊಂದಿಗೆ ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!