ಕೊಡಗು: ವ್ಯಕ್ತಿಗೆ ಕೊರೋನಾ, 306 ಜನರ ಮೇಲೆ ನಿಗಾ
ಮಡಿಕೇರಿ: ದುಬೈನಿಂದ ವಾಪಸ್ ಆಗಿದ್ದ ಕೊಡಗಿನ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮುನ್ನಚ್ಚರಿಕಾ ಕ್ರಮಗಳನ್ನು ಬಿಡುಗಡೆ ಮಾಡಿದೆ.
ಕೊಡಗು ಜಿಲ್ಲಾಧಿಕಾರಿ ಅನೀಸ್.ಕೆ.ಜಾಯ್ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಕೊಡಗು ಮೂಲದ 35 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮೈಸೂರಿನ ಮೆಡಿಕಲ್ ಕಾಲೇಜಿನ ವರದಿ ಪ್ರಕಾರ ವಿದೇಶಕ್ಕೆ ತೆರಳಿ ವಾಪಸ್ಸಾಗಿದ್ದ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಹೀಗಾಗಿ ಕೊಡಗಿನಲ್ಲಿ ಕೊರೊನಾ ವೈರಸ್ ಪತ್ತೆಯಾದ ವ್ಯಕ್ತಿಯ ಗ್ರಾಮದ 500 ಮೀಟರ್ ಪ್ರದೇಶವನ್ನು ಬಫರ್ ಜೋನ್ ಎಂದು ಘೋಷಿಸಲಾಗಿದ್ದು, ಸೋಂಕಿತನ ಸಂಪರ್ಕಕ್ಕೆ ಬಂದಿದ್ದ ಗ್ರಾಮದ 306 ಜನರ ಜನರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಕೊಡಗಿನ ಕೊಂಡಂಗೇರಿ ನಿವಾಸಿ ಕೊರೋನಾ ಶಂಕಿತನಾಗಿದ್ದು, ಗ್ರಾಮದ ಸುತ್ತ ಆರೊಗ್ಯ ಇಲಾಖೆಯಿಂದ ಚೆಕ್‍ಪೋಸ್ಟ್ ನಿರ್ಮಿಸಿ ತೀವ್ರ ನಿಗಾ ವಹಿಸಲಾಗಿದೆ ಎಂದು ಹೇಳಿದರು.
ಮಾರ್ಚ್ 31 ರವರೆಗೆ ಗ್ರಾಮದಲ್ಲೇ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಲಾಗುವುದು. ಗ್ರಾಮಸ್ಥರು ಯಾವುದೇ ಕಾರಣಕ್ಕೂ ಮದುವೆ, ಶುಭ-ಸಮಾರಂಭಗಳಿಗೆ ಹೋಗುವಂತಿಲ್ಲ. ಸಂತೆಗಳು, ಮಾರ್ಕೆಟ್ ಹಾಗೂ ಜಾತ್ರೆಗಳನ್ನು ನಡೆಸುವಂತಿಲ್ಲ. ಹಣ್ಣು, ತರಕಾರಿ ಹಾಗೆಯೇ ಮೆಡಿಕಲ್ ಕ್ಲಿನಿಕ್‍ಗಳನ್ನು ಅಲ್ಲಿಯೇ ತೆರೆಯಲಾಗಿದೆ. ಈಗಾಗಲೇ 185 ಕೊರೋನಾ ಶಂಕಿತರನ್ನು ಅವರವರ ಮನೆಯಲ್ಲೇ ತಪಾಸಣೆಗೆ ನಡೆಸಲಾಗುತ್ತಿದೆ. ವಿದೇಶಗಳಿಂದ ಜಿಲ್ಲೆಗೆ ಬಂದಿರುವ 5 ಪ್ರವಾಸಿಗರನ್ನು ಅವರು ಉಳಿದಿರುವ ಹೋಂ ಸ್ಟೇಗಳಲ್ಲೇ ಇರುವಂತೆ ತಿಳಿಸಿದ್ದೇವೆ. ಅಲ್ಲದೆ ಐಪಿಸಿ ಸೆಕ್ಷನ್ 144(3) ಕಾನೂನು ವ್ಯಾಪ್ತಿಗೆ ಒಳಪಡುವ ಹೋಟೆಲ್, ರೆಸ್ಟೋರೆಂಟ್ಸ್, ಅಂಗಡಿಗಳನ್ನು ತೆರೆಯುವಂತಿಲ್ಲ. ಇದಕ್ಕೆ ಗ್ರಾಮಸ್ಥರು ಸಹಕರಿಸಬೇಕು ಎಂದು ಅನೀಸ್.ಕೆ.ಜಾಯ್ ಮನವಿ ಮಾಡಿದ್ದಾರೆ.