ಕೊರೋನಾ ಭೀತಿಗೆ ಕಾಪು ಸುಗ್ಗಿ ಮಾರಿಪೂಜೆ ರದ್ದು
ಉಡುಪಿ: (ಉಡುಪಿ ಟೈಮ್ಸ್ ವರದಿ)ಕೊರೋನಾ ಸೋಂಕಿನ ವೈರಸ್ ಹರಡುವ ಸಾಧ್ಯತೆಯಿರುವುದರಿಂದ ಈ ವರ್ಷದ ಕಾಪುವಿನ ಇತಿಹಾಸ ಪ್ರಸಿದ್ದ ಸುಗ್ಗಿ ಮಾರಿಪೂಜೆ ಜಾತ್ರಾ ಮಹೋತ್ಸವವನ್ನು ರದ್ದು ಪಡಿಸಲಾಗಿದೆ.
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಹೊಸ ಮಾರಿಗುಡಿ, ಹಳೆ ಮಾರಿಗುಡಿ ಮತ್ತು ಹಳೆ ಮಾರಿಗುಡಿಗಳಲ್ಲಿ ಮಾರ್ಚ್ 24 ಮತ್ತು 25ರಂದು ನಡೆಯಲಿರುವ ಜಾತ್ರೆಯನ್ನು ರದ್ದುಗೊಳಿಸಲಾಗಿದೆ. ಅಂದು ವರ್ಷಂ ಪ್ರತಿ ನಡೆಯುವ ಶ್ರೀ ದೇವಿಯ ಆರಾಧನೆ, ಪೂಜೆಗಳು ದೇವಸ್ಥಾನ ವತಿಯಿಂದ ನಡೆಯುತ್ತದೆ. ಆದರೆ ಯಾವುದೇ ಭಕ್ತರು ಅಂದು ದೇವಸ್ಥಾನಕ್ಕೆ ಭೇಟಿ ನೀಡುವಂತಿಲ್ಲ, ಭಕ್ತರೂ ಕೂಡ ಯಾವುದೇ ಕೋಳಿ ,ಕುರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಲಿ ಕೊಡುವಂತಿಲ್ಲ.
ಈಗಾಗಲೇ ರಾಜ್ಯದದ್ಯಾಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸರಕಾರದ ಆದೇಶದಂತೆ ಯಾವುದೇ ಜಾತ್ರೆ, ಸಭೆ ಸಮಾರಂಭ ನಡೆಸಲು ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಂದು ಹಳೆ ಮಾರಿಗುಡಿಯ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ “ಉಡುಪಿ ಟೈಮ್ಸ್ “ಗೆ ತಿಳಿಸಿದರು.
ಮಾ. 24 ಮತ್ತು 25 ಜಾತ್ರೆಯ ದಿನ ದೇವಸ್ಥಾನಕ್ಕೆ ಸಾರ್ವಜನಿಕರ ಭೇಟಿಗೆ ನಿರ್ಬಂಧ ಹೇರಲಾಗಿದೆ. ಅಂದು ದೇವಸ್ಥಾನ ವಠಾರದಲ್ಲಿ ಯಾವುದೇ ಹೂ,ಹಣ್ಣು, ಕೋಳಿ, ಕುರಿ ಮಾರಾಟದ ಅಂಗಡಿಗಳನ್ನು ನಿರ್ಮಿಸಲು ಯಾರಿಗೂ ಪರವಾನಿಗೆ ನೀಡಲಾಗಿಲ್ಲ,
ಸುಗ್ಗಿ ತಿಂಗಳ ಹರಕೆಗಳನ್ನು ಜೂನ್‌ನಲ್ಲಿ ನಡೆಯುವ ಆಟಿ ಮಾರಿಪೂಜೆಯ ದಿನದಂದು ಸಲ್ಲಿಸಲು ಅವಕಾಶವಿದೆ. ಆದ್ದರಿಂದ ಭಕ್ತರು ಯಾವುದೇ ಗೊಂದಲಕ್ಕೆ ಒಳಗಾಗದೇ ಆಡಳಿತ ಮಂಡಳಿ, ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸಿಬೇಕೆಂದು ಈ ಸಂದರ್ಭ ಮನವಿ ಮಾಡಿದರು.