ಕೊರೋನಾ ಭೀತಿ, ತೀವ್ರ ಕಟ್ಟೆಚ್ಚರ: ಎಲ್ಲಾ ಜಿಲ್ಲೆಗಳಿಗೆ ಮಾರ್ಗಸೂಚಿ
ಬೆಂಗಳೂರು: ಬೆಂಗಳೂರು ಟೆಕ್ಕಿಯೊಬ್ಬರಿಗೆ ಮಾರಕ ಕೊರೋನಾ ಸೋಂಕು ದೃಢಪಟ್ಟ ಬೆನ್ನಲ್ಲೇ ರಾಜ್ಯದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ವಿಮಾನ ನಿಲ್ದಾಣ, ಬಂದರು, ರೈಲು ನಿಲ್ದಾಣ, ಪ್ರಮುಖ ಬಸ್ ನಿಲ್ದಾಣ, ಪ್ರವಾಸಿ ತಾಣಗಳಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ತಗೆದುಕೊಳ್ಳಲಾಗಿದ್ದು, ವೈರಸ್ ಎದುರಿಸಲು ಆರೋಗ್ಯ ಇಲಾಖೆ ಸರ್ವಸನ್ನದ್ಧವಾಗಿ ಕಾರ್ಯನಿರ್ವಹಿಸುತ್ತಿದೆ.
ರಾಜ್ಯದ ಎಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಆಸ್ಪತ್ರೆಗಳು, ಜಿಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಕೊರೋನಾ ಶಂಕಿತರು ಹಾಗೂ ಸೋಂಕಿತರ ಚಿಕಿತ್ಸೆಗಾಗಿ ಒಟ್ಟು 350 ಹಾಸಿಗೆಗಳ ಪ್ರತ್ಯೇಕ ವಾರ್ಡ್ ಗಳ ವ್ಯವಸ್ಥೆ ಮಾಡಲಾಗಿದೆ. 1720ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಎಲ್ಲೆಡೆ ಅಗತ್ಯ ಔಷಧ, ಎನ್ 95 ಮಾಸ್ಕ್ ಸೇರಿದಂತೆ ಎಲ್ಲಾ ವೈಯಕ್ತಿಕ ರಕ್ಷಣಾ ಸಾಮಾಗ್ರಿಗಳ ದಾಸ್ತಾನು ಇಡಲಾಗಿದೆ. ಪ್ರಯೋಗ ಶಾಲೆಗಳಲ್ಲಿ ಶಂಕಿತ ರೋಗಿಗಳ ಗಂಟಲಿನದ್ರವಗಳ ಮಾದರಿ ಸಂಗ್ರಹಣೆ, ಪ್ಯಾಕಿಂಗ್ ಮತ್ತು ಸಾಗಾಣಿಕೆಗೆ ಸುರಕ್ಷಿತ ವ್ಯವಸ್ಥೆ ಮಾಡಲಾಗಿದೆ.
ಈ ನಡುವೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಜಯನಗರದ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ ಕೇಂದ್ರದಲ್ಲಿ ಕೊರೋನಾ ಮಾದರಿ ರಕ್ತ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ .
ರಕ್ತದ ಮಾದರಿಯನ್ನು ಪರೀಕ್ಷೆಗೆಂದು ಪುಣೆಗೆ ರವಾನಿಸಲಾಗುತ್ತಿದ್ದು, ಸರ್ಕಾರಿ ಬಸ್ಸು ಹಾಗೂ ನಿಲ್ದಾಣಗಳಲ್ಲಿ ಸ್ವಚ್ಛತೆ ನಿರ್ವಹಣೆ ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಶಾಲೆಗಲಲ್ಲಿ ಮಕ್ಕಳಿಗೆ ಶೀತ, ಜ್ವರ, ನೆಗಡಿ ಲಕ್ಷಣಗಳಿದ್ದರೆ ಕಡ್ಡಾಯ ರಜೆ ನೀಡಬೇಕು ಎಂದು ಈಗಾಗಲೇ ಶಿಕ್ಷಣ ಇಲಾಖೆಯಿಂದ ಆದೇಶಿಸಲಾಗಿದೆ.
ರೋಗ ಲಕ್ಷಣಗಳ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಇಲಾಖೆ ವತಿಯಿಂದ ಹೆಚ್ಚು ಜನ ಸೇರುವ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಪ್ರವಾಸಿ ತಾಣಗಳಲ್ಲಿ ಹೋರ್ಡಿಂಗ್ ಅಳವಡಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ವಿದೇಶದಿಂದ ಬಂದ ಜನರನ್ನು ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಜಿಲ್ಲೆಗಳಿಗೆ ಆರೋಗ್ಯ ಇಲಾಖೆ ಕೆಲ ಮಾರ್ಗಸೂಚಿಗಳನ್ನು ರವಾನಿಸಿದೆ.
This is good precaution govt has taken