ಕೊರೊನಾ ಸೋಂಕು- ಪದ್ಮಶ್ರೀ ಪುರಸ್ಕೃತ ನಿರ್ಮಲ್ ಸಿಂಗ್ ಸಾವು
ಚಂಡೀಗಢ: ಕೊರೊನಾ ಸೋಂಕಿಗೆ ಒಳಗಾಗಿದ್ದ ಪದ್ಮಶ್ರೀ ಪುರಸ್ಕೃತ ನಿರ್ಮಲ್ ಸಿಂಗ್ ಅವರು ಇಂದು ವಿಧಿವಶರಾಗಿದ್ದಾರೆ.
ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ 62 ವರ್ಷದ ನಿರ್ಮಲ್ ಸಿಂಗ್ ಪಂಜಾಬ್‍ನ ಅಮೃತಸರ್ ನಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೊರೊನಾ ಸೋಂಕು ತಗುಲಿರುವುದು ಬೆಳಕಿಗೆ ಬಂದಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ.
ಸಿಂಗ್ ಅವರು ಇತ್ತೀಚೆಗೆ ವಿದೇಶದಿಂದ ಮರಳಿದ್ದರು, ಮಾರ್ಚ್ 30ರಂದು ಉಸಿರಾಟದ ತೊಂದರೆ, ತಲೆ ತಿರುಗುವುದರಿಂದಾಗಿ ಗುರು ನಾನಕ್ ದೇವ್ ಆಸ್ಪತ್ರೆಗೆ ದಾಖಲಾಗಿದ್ದರು. ಇದಾದ ಬಳಿಕ ನಿರ್ಮಲ್ ಸಿಂಗ್ ವಾಸಿಸುತ್ತಿದ್ದ ಪ್ರದೇಶವನ್ನು ಪೊಲೀಸರು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ.
ವಿದೇಶದಿಂದ ಮರಳಿದ ನಂತರ ಸಿಂಗ್ ಅವರು ದೆಹಲಿ ಸೇರಿದಂತೆ ಇತರ ಪ್ರದೇಶಗಳಲ್ಲಿ ಹಲವು ಜನರನ್ನು ಸಂಪರ್ಕಿಸಿದ್ದಾರೆ. ಅಲ್ಲದೆ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ನಿರ್ಮಲ್ ಸಿಂಗ್ ಅವರಿಗೆ 2009ರಲ್ಲಿ ಪದ್ಮಿಶ್ರೀ ಗೌರವ ನೀಡಲಾಗಿದೆ.