ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕ್‌ಗಳನ್ನುಒಂದೇ ಕಾನೂನಿನಲ್ಲಿ ನೋಡುತ್ತಿದೆ
ಉಡುಪಿ: ಜನರು ಸಹಕಾರಿ ಸಂಘಗಳ ಕುರಿತಂತೆ ನಿರಾಶವಾದಿಗಳಾಗುವ ಅಗತ್ಯವಿಲ್ಲ.
ಆಶಾವಾದಿಗಳಾಗಿ ಸಹಕಾರಿ ಸಂಘಗಳನ್ನು ಉಳಿಸಿಕೊಳ್ಳಬೇಕೆಂಬ ಚಿಂತನೆಯನ್ನು
ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಸಂಯುಕ್ತ ಆಶ್ರಯದಲ್ಲಿ ಉಡುಪಿ ಅಮ್ಮಣ್ಣಿರಾಮಣ್ಣ ಸಭಾಂಗಣದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಬಹೃತ್ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಬದುಕಿಗೆ ಇನ್ನಷ್ಟು ಬಲ ಬರಬೇಕಾದರೆ ಸಹಕಾರಿ ಹೋರಾಟವನ್ನು ಮುಂದುವರಿಸಿಕೊಂಡು ಹೋಗಬೇಕು. ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.
ಆರ್‌ಬಿಐ ಸಹಕಾರಿ ಬ್ಯಾಂಕ್ ಹಾಗೂ ವಾಣಿಜ್ಯ ಬ್ಯಾಂಕ್‌ಗಳನ್ನು ಒಂದೇ ಕಾನೂನಿನಡಿಯಲ್ಲಿ ನೋಡುತ್ತಿದೆ. ಸಹಕಾರಿ ಸಂಘಗಳು ಜನರು ಹಾಗೂ ಸದಸ್ಯರಿಂದ
ಸಂಗ್ರಹಿಸುವ ಠೇವಣಿಯಿಂದ ವ್ಯವಹಾರ ನಡೆಸುತ್ತಿದೆ. ಅದರಿಂದಲೇ ಸಾಲ ನೀಡುತ್ತಿದ್ದು,
ಸರ್ಕಾರದ ಸಾಲಮನ್ನಾವನ್ನು ಮಾಡುತ್ತಿದೆ. ಅದರಿಂದ ಬರುವ ಬಡ್ಡಿಯನ್ನು ಉಪಯೋಗಿಸಿಕೊಂಡು ಲಾಭದಲ್ಲಿ ಮುಂದುವರಿಯುತ್ತಿದೆ. ಆದರೆ ಸರ್ಕಾರಿ ಕೋಟಿಗಟ್ಟಲೆ ಹಣ ಪಡೆದರೂ ವಾಣಿಜ್ಯ ಬ್ಯಾಂಕ್‌ಗಳು ನಷ್ಟವನ್ನು ತೋರಿಸುತ್ತಿದೆ ಎಂದು ಟೀಕಿಸಿದರು.
ಸರ್ಕಾರ ಹಾಗೂ ಜನರ ಕೆಲಸ ಮಾಡುವಾಗ ನಮ್ಮ ಬಗ್ಗೆ ನಂಬಿಕೆ ಇದೆ. ಆದರೆ ಸಹಕಾರಿ
ಬ್ಯಾಂಕ್‌ಗಳಲ್ಲಿ ಸರ್ಕಾರದ ಹಣ ಠೇವಣಿ ಮಾಡಿ ಎಂದಾಗ ನಂಬಿಕೆಯ ಪ್ರಶ್ನೆ ಬರುತ್ತದೆ.
ಜನರಿಂದ ಆಯ್ಕೆಯಾದ ಆಡಳಿತ ಮಂಡಳಿ, ಜನರಿಗಾಗಿ ಕೆಲಸ ಮಾಡುವ ಸಿಬ್ಬಂದಿಯ ಇಟ್ಟುಕೊಂಡು ನಾವು ಲಾಭದಲ್ಲಿ ಇದ್ದೇವೆ. ಹಾಗಾಗಿ ಆರ್ಥಿಕವಾಗಿ ಶಕ್ತಿಶಾಲಿ ಯಾರೆಂಬುವುದು ಇದರಲ್ಲಿಯೇ ಗೊತ್ತಾಗುತ್ತದೆ ಎಂದು ಹೇಳಿದರು.
ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್ ಹಾಗೂ
ಲೆಕ್ಕಪರಿಶೋಧಕ ಪ್ರಸನ್ನ ಶೆಣೈ ಮಾತನಾಡಿದರು.
ಸಹಕಾರ ಸಂಘಗಳ ಕರ ನಿರ್ಧಿಸುವ ವೇಳೆ ಆದಾಯ ತೆರಿಗೆ ಕಾಯ್ದೆ ಕಲಂ 80ಪಿ ಯಡಿ ಸಿಗುವವಿನಾಯಿತಿಯನ್ನು ಸಹಕಾರಿ ಸಂಘಗಳಿಗೆ ನೀಡುವಂತೆ ವಿತ್ತ ಸಚಿವರನ್ನು ಒತ್ತಾಯಿಸಲು ಸಮಾವೇಶದಲ್ಲಿ ತೀರ್ಮಾನಿಸಲಾಯಿತು. ಹೊಸದಾಗಿ ಜಾರಿಗೆ ಬಂದ ಆದಾಯ ತೆರಿಗೆ ಕಾಯ್ದೆ ಕಲಂ 194ರಲ್ಲಿ ವಿನಾಯಿತಿ ನೀಡಬೇಕು. ಜಿಎಸ್‌ಟಿ ತೆರಿಗೆ ವಿಧಿಸುವ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಯನ್ನು ಪರಿಹಾರಿಸಬೇಕು. ಒಂದು ಸಹಕಾರ ಸಂಸ್ಥೆ ಒಂದು ವೃತ್ತಿ ತೆರಿಗೆ ವಿಧಿಸಬೇಕು. ಶಾಖಾವಾರು ವೃತ್ತಿ ತೆರಿಗೆಯನ್ನು ಸಂಗ್ರಹಿಸದಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಲಾಯಿತು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಮುಖಂಡರಾದ ದೇವಿಪ್ರಸಾದ್ ಶೆಟ್ಟಿ, ಕೃಷ್ಣರಾಜ ಸರಳಾಯ, ರಾಜು ಪೂಜಾರಿ, ಅಶೋಕ್ ಶೆಟ್ಟಿ, ಹರೀಶ್ ಕಿಣಿ ಅಲೆವೂರು ಉಪಸ್ಥಿತರಿದ್ದರು.