ಕೊಡಗಿನಲ್ಲಿ ಆರ್ದ್ರಾ ಮಳೆಯ ಸಡಗರ
ಮಡಿಕೇರಿ: ಕೊಡಗಿನ ಬಹುತೇಕ ಕಡೆಗಳಲ್ಲಿ ಗುರುವಾರ ಮಧ್ಯಾಹ್ನದ ನಂತರ ನಿರಂತರವಾಗಿ ಮಳೆಯಾಗಿದೆ. ಆರ್ದ್ರಾ ಮಳೆಯ ಕೊನೆಯ ಪಾದದಲ್ಲಿ ಮಳೆ ಚುರುಕುಗೊಂಡಿದ್ದು, ಈ ವೇಗ ಪುನರ್ವಸುವಿಗೂ ವಿಸ್ತರಿಸಬಹುದೇ ಎನ್ನುವುದನ್ನು ಕಾದು ನೋಡಬೇಕಷ್ಟೆ.
ಬೆಳಗ್ಗಿನಿಂದಲೇ ಮಡಿಕೇರಿ ವ್ಯಾಪ್ತಿಯಲ್ಲಿ ದಟ್ಟ ಮಂಜು, ಆಗೊಮ್ಮೆ ಈಗೊಮ್ಮೆ ಸುರಿಯುತ್ತಿದ್ದ ಮಳೆ ಮುಂಗಾರು ಚೇತರಿಸಿಕೊಳ್ಳುತ್ತಿರುವ ಸೂಚನೆಯನ್ನು ನೀಡಿದೆ.
ಕಳೆದ ಸಾಲಿನಲ್ಲಿ ಇದೇ ಅವಧಿಗೆ 53.48 ಇಂಚು ಸರಾಸರಿ ಮಳೆ ಜಿಲ್ಲೆಯಲ್ಲಿ ಆಗಿತ್ತಾದರೆ, ಪ್ರಸಕ್ತ ಸಾಲಿನಲ್ಲಿ ಕೇವಲ 17.76 ಇಂಚು ಮಳೆಯಾಗಿದ್ದು, ಜಿಲ್ಲೆ ಬರದ ಹೊಸ್ತಿಲಿನಲ್ಲಿ ನಿಂತು ಬಿಟ್ಟಿದೆಯೋ ಎನ್ನುವ ಆತಂಕದ ಪರಿಸ್ಥಿತಿಯ ನಡುವೆ ಸುರಿದ ಮಳೆ ಒಂದಷ್ಟು ನೆಮ್ಮದಿಯನ್ನು ಜಿಲ್ಲೆಯ ರೈತಾಪಿ ವರ್ಗದಲ್ಲಿ ಹಾಗೂ ಸಾರ್ವಜನಿಕರಲ್ಲಿ ಮೂಡಿಸಿದೆ.