ಒಮೇಗಾ ಕೋಳಿ ಸಾಕಾಣಿಕೆ ಸಂಸ್ಥೆ ವಿರುದ್ಧ ಮುಂದುವರಿದ ವಂಚನೆ ದೂರಿನ ಸರಮಾಲೆ
ಕಾರ್ಕಳ : ನಂಜನಗೂಡಿನ ಒಮೇಗಾ ಎನ್ನುವ ಕೋಳಿ ಸಾಕಾಣಿಕಾ ಸಂಸ್ಥೆಯು ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಕಾಸನಮಕ್ಕಿ ದೊಡ್ಡಾಡಿಮನೆ ಭಾಸ್ಕರ ಹೆಗ್ಡೆ ಎಂಬವರಿಗೆ ಕೋಳಿಗಳನ್ನು ಸರಬರಾಜು ಮಾಡುವುದಾಗಿ ಆರಂಭದಲ್ಲಿ ಕೋಳಿ ನೀಡಿ ಬಳಿಕ ಅದರ ಮೊಟ್ಟೆಯನ್ನು ಖರೀದಿಸಿ ತದನಂತರ ಮೊಟ್ಟೆಯ ಹಣ ಹಾಗೂ ಕರಾರಿನ ಮೊತ್ತವನ್ನು ನೀಡದೆ ವಂಚಿಸಿರುವ ಪ್ರಕರಣ ನಡೆದಿದೆ.
ಭಾಸ್ಕರ ಹೆಗ್ಡೆಯವರು 2018 ರ ಆಗಸ್ಟ್ 1 ರಂದು ನಂಜನಗೂಡಿನ ಒಮೇಗಾ ಎಂಬ ಕೋಳಿ ಸಾಕಾಣಿಕ ಸಂಸ್ಥೆಯ ಎಲ್.ಎಸ್ ಪ್ರಮೋದ, ಸಂಪತ್ ಶೆರ್ಲಿ, ಪ್ರಮೋದ್ ಲಾಜರ್ ಸುಶೀಲ್ ಬಾಯಿ, ಪ್ರಮೋದ್ ಶರ್ಲಿ, ಬೆನ್ಸಿನ್, ಅರುಣ್ ರಾಮಚಂದ್ರನ್, ವಿಷ್ಣು ಕುಮಾರ ಹಾಗೂ ಸುನಿಲ್ ರಾಬಿನ್ ಇವರೊಂದಿಗೆ ಪತ್ರಿಕಾ ಜಾಹೀರಾತಿನ ಮೂಲಕ ಕೋಳಿ ಸಾಕಾಣಿಕಾ ಉದ್ಯಮದ ಮಾತುಕತೆ ನಡೆಸಿ ತಲಾ ಒಂದು ಕೋಳಿಯು 18 ತಿಂಗಳು ಕಾಲ ಮೊಟ್ಟೆ ಇಡುತ್ತದೆ ಮತ್ತು ಅದರಂತೆ ಒಂದು ಕೋಳಿ1000 ರೂ. ಹಾಗೂ ಅವುಗಳನ್ನು ಸಾಕಲು ರೂ.25000 ಬೋನಿನ ವೆಚ್ಚ ಸೇರಿ 1,35,000 ರೂ. ಹಣ ಪಾವತಿಸಿ 10 ವರ್ಷಗಳಿಗೆ ಕರಾರು ಮಾಡಿಕೊಂಡಿದ್ದರು. ಇದಾದ ಬಳಿಕ 100 ಕೋಳಿಗಳನ್ನು ಖರೀದಿಸಿ ಅವುಗಳ ಮೊಟ್ಟೆಗಳನ್ನು ಕರಾರಿನ ಆಧಾರದಲ್ಲಿ ಕಂಪೆನಿಯ ಖರೀದಿಸಿದ್ದರು. ಆದರೆ ಭಾಸ್ಕರ ಹೆಗ್ಡೆಯವರಿಗೆ ಖರೀದಿಸಿದ ಮೊಟ್ಟೆಯ ಹಣ ಪಾವತಿಸದೆ ಇದ್ದಾಗ ಅವರು ನಂಜನಗೂಡಿಗೆ ಹೋದಾಗ ಈ ಕಂಪೆನಿಯಿಂದ ಸಾಕಷ್ಟು ಜನ ಮೋಸಹೋದವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕಂಪೆನಿಯೊಂದಿಗೆ ಹಣ ತೊಡಗಿಸಿದ್ದ ಗ್ರಾಹಕರಿಗೆ ನಿಗದಿತ ವಾಯಿದೆಯೊಳಗೆ ಹಣವನ್ನು ಮರುಪಾವತಿ ಮಾಡುವುದಾಗಿ ಕಂಪೆನಿಯು ಹೇಳಿತ್ತು.ಬಳಿಕ ಓಮೇಗಾ ಕಂಪೆನಿಯ ಮಾಲೀಕರು ತಮ್ಮ ಕಚೇರಿಯನ್ನು ಮುಚ್ಚಿ ನಾಪತ್ತೆಯಾಗಿದ್ದರು. ಈ ಬಗ್ಗೆ ಆರೋಪಿಗಳಿಗೆ ಕರೆ ಮಾಡಿ ಹಣವನ್ನು ಮರಳಿಸುವಂತೆ ಕೇಳಿದಾಗ ಇವರಿಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಭಾಸ್ಕರ ಹೆಗ್ಡೆಯವರು ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.